ದೇಶದಲ್ಲಿ ಶಾಂತಿ ನೆಲೆಸಲಿ

26kst-1
ಕುಷ್ಟಗಿಯ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಅಶೋಕ ಶಿಗ್ಗಾವಿ ಧ್ವಜಾರೋಹಣ ನೆರವೇರಿಸಿದರು. ಶಾಸಕ ದೊಡ್ಡನಗೌಡ ಪಾಟೀಲ್, ತಾಪಂ ಇಒ ಪಂಪಾಪತಿ ಹಿರೇಮಠ, ಬಿಇಒ ಸುರೇಂದ್ರ ಕಾಂಬಳೆ ಇತರರಿದ್ದರು.
Published on

ಕುಷ್ಟಗಿ: ದೇಶದಲ್ಲಿರುವ ಎಲ್ಲರೂ ಒಗ್ಗಟ್ಟಾಗಿ ಸಮಾನತೆ ಸಾಧಿಸಿದಾಗ ಮಾತ್ರ ಸಂವಿಧಾನದ ಆಶಯ ಈಡೇರಲು ಸಾಧ್ಯವಾಗುತ್ತದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.

ಗಣರಾಜ್ಯೋತ್ಸವ ನಿಮಿತ್ತ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ದುಷ್ಟ ಹಾಗೂ ಆಗಂತುಕ ಕೃತ್ಯಗಳ ಮೂಲಕ ಭಯ ಹುಟ್ಟಿಸುವವರ ಶಕ್ತಿ ಅಡಗಿಸಿ ದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕಿದೆ. ಈವರೆಗೆ ಸಂವಿಧಾನದಲ್ಲಿ ಹಲವು ತಿದ್ದುಪಡಿ ಮಾಡಲಾಗಿದೆ.

ಅವುಗಳಲ್ಲಿ ಬಹುತೇಕ ತಿದ್ದುಪಡಿಗಳನ್ನು ಸ್ವಾರ್ಥಕ್ಕಾಗಿ ಮಾಡಿಕೊಂಡವರೇ ಸಂವಿಧಾನ ಅಪಾಯದಲ್ಲಿದೆ ಎಂದು ದೊಡ್ಡ ಧ್ವನಿಯಲ್ಲಿ ಹೇಳುತ್ತಿದ್ದಾರೆ. ಸಂವಿಧಾನ ರಚನಾ ಸಮಿತಿಯಲ್ಲಿ ಅಂಬೇಡ್ಕರ ಅವರನ್ನು ಹೊರಗಿಡಲು ಯತ್ನಿಸಿದವರು ಇಂದು ಈ ರೀತಿ ಹೇಳುತ್ತಿರುವುದು ವಿಪರ್ಯಾಸ. ಸಮಿತಿಯಲ್ಲಿ ಅಂಬೇಡ್ಕರ ಇರದೇ ಹೋಗಿದ್ದಲ್ಲಿ ಸರ್ವಶ್ರೇಷ್ಠ ಸಂವಿಧಾನ ಇರುತ್ತಿರಲಿಲ್ಲ. ಸಂವಿಧಾನಕ್ಕೆ ಶಕ್ತಿ ತುಂಬಿದವರೆ ಡಾ.ಬಿ.ಆರ್.ಅಂಬೇಡ್ಕರರು ಎಂದು ಬಣ್ಣಿಸಿದರು.

ತಹಸೀಲ್ದಾರ್ ಅಶೋಕ ಶಿಗ್ಗಾವಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಪುರಸಭೆ ಅಧ್ಯಕ್ಷ ಮಹಾಂತೇಶ ಕಲಬಾವಿ, ಉಪಾಧ್ಯಕ್ಷೆ ನಾಹಿನ್ ಬೇಗಂ, ಸದಸ್ಯ ಜೆ.ಜಿ.ಆಚಾರ್, ತಾಪಂ ಇಒ ಪಂಪಾಪತಿ ಹಿರೇಮಠ, ಬಿಇಒ ಸುರೇಂದ್ರ ಕಾಂಬಳೆ, ಸಿಡಿಪಿಒ ಯಲ್ಲಮ್ಮ ಹಂಡಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ವಿ.ಡಾಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net