

ಚಿತ್ರದುರ್ಗ: ಮೌಢ್ಯಗಳನ್ನು ಪ್ರಶ್ನಿಸುವ ಜನರಿಗೆ ದುರ್ಗತಿ ಕಾದಿರುತ್ತದೆ ಎನ್ನುವ ಸಂದೇಶವನ್ನು ದುಷ್ಟ ಶಕ್ತಿಗಳು ಹಿಂದಿನಿಂದಲೂ ಸಾರುತ್ತಾ ಬಂದಿವೆ ಎಂದು ಚಿತ್ರದುರ್ಗ ವಿಜ್ಞಾನ ಕೇಂದ್ರದ ಅಧ್ಯಕ್ಷ ಜೆ.ಯಾದವರೆಡ್ಡಿ ಹೇಳಿದರು.
ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನದ ಅಂಗವಾಗಿ ಸೋಮವಾರ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳೊಂದಿಗೆ ಏರ್ಪಡಿಸಿದ್ದ ಸಂವಾದ ಕಾರ‌್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಂದಾಚಾರ ಆಚರಣೆಯಲ್ಲಿ ದೇಶ ಮುಂದಿದೆ ಎಂದು ವಿಷಾದಿಸಿದರು.
ಬುದ್ಧ, ಬಸವ, ಅಂಬೇಡ್ಕರ್ ಮೊದಲಾದ ದಾರ್ಶನಿಕರು, ವಿಚಾರವಂತರು ಮೂಢನಂಬಿಕೆಗಳ ವಿರುದ್ಧ ನಿರಂತರವಾಗಿ ಹೋರಾಟವನ್ನು ಮಾಡಿಕೊಂಡು ಬಂದಿದ್ದಾರೆ. ಅನೇಕರು ಈ ಚಳವಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದರು.
ಕೇಂದ್ರದ ಉಪಾಧ್ಯಕ್ಷ ಎಂ.ಆರ್.ದಾಸೆಗೌಡ ಮಾತನಾಡಿ, ಶಿಕ್ಷಣದೊಂದಿಗೆ ವೈಜ್ಞಾನಿಕ ನೆಲೆಯಲ್ಲಿ ಜೀವನವನ್ನು ಕಟ್ಟಿಕೊಳ್ಳಬೇಕಿದೆ ಎಂದರು.
ಪ್ರಾಚಾರ‌್ಯ ಪ್ರೊ.ಸಿದ್ರಾಮ ಗೊಂಡ ಅಧ್ಯಕ್ಷತೆ ವಹಿಸಿದ್ದರು. ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ನಾಗರಾಜ್, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿ.ಎನ್.ಸುಧಾಮ, ಕೇಂದ್ರದ ಖಜಾಂಚಿ ಕೆ.ರಾಮಪ್ಪ, ಸದಸ್ಯರಾದ ಎಂ.ಬಿ.ಜಯದೇವಮೂರ್ತಿ, ಮನೋಹರ್ ಇದ್ದರು.