

ವಿಜಯಪುರ: ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತ್ಯುತ್ತರ ಎಂಬಂತೆ ಭಾರತೀಯ ಸೈನ್ಯ ನಡೆಸಿದ ದಾಳಿಯನ್ನು ಸ್ವಾಗತಿಸಿರುವ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲರು ನಮಗೆ ದೇಶ ಮೊದಲು-ಪಕ್ಷ, ಜಾತಿ-ಧರ್ಮ ನಂತರದ ವಿಚಾರ ಎಂದರು.
ದೇಶದ ಭದ್ರತೆ ವಿಚಾರದಲ್ಲಿ ನಾವು ಭಾರತೀಯ ಸೈನ್ಯ, ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡುತ್ತೇವೆ. ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನ ಹೋರಾಟ ಅಗತ್ಯ. ಉಗ್ರರ ದಾಳಿ ಹೇಯ ಹಾಗೂ ಹೇಡಿ ಕೃತ್ಯ. ಹೀಗಾಗಿ ಭಾರತೀಯ ಸೈನಿಕರು ಉಗ್ರರ ತಾಣಗಳ ಮೇಲೆ ನಡೆಸಿದ ದಾಳಿಯನ್ನು ಸ್ವಾಗತಿಸುವುದಾಗಿ ಬುಧವಾರ ಸುದ್ದಿಗಾರರಿಗೆ ಅವರು ತಿಳಿಸಿದರು.
ಇನ್ನು ಯುದ್ದದ ಸಂದರ್ಭದಲ್ಲಿಯೇ ಕೆಪಿಸಿಸಿ ಅಧಿಕೃತ ಜಾಲತಾಣದಲ್ಲಿ ಶಾಂತಿ ಮಂತ್ರ ಪಠಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವರು, ಎಲ್ಲರೂ ನಿಶ್ಚಿತವಾಗಿ ಶಾಂತಿ ಬಯಸುತ್ತಾರೆ. ಭಾರತ ಶಾಂತಿಯುತ ರಾಷ್ಟ್ರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಉಗ್ರರ ಅಟ್ಟಹಾಸದ ವಿಚಾರದಲ್ಲಿ ಈ ಮಂತ್ರ ನಡೆಯಲ್ಲ. ಉಗ್ರರ ವಿರುದ್ಧ ಮತ್ತು ಪಾಕಿಸ್ತಾನದ ವಿರುದ್ಧ ನಾವು ಸೇಡು ತೀರಿಸಿಕೊಳ್ಳಲೇಬೇಕಿದೆ. ಈ ವಿಚಾರದಲ್ಲಿ ಭಾರತದ 140 ಕೋಟಿ ಜನ ಒಗ್ಗಟ್ಟಾಗಿದ್ದೇವೆ. ಎಲ್ಲ ಪಕ್ಷಗಳೂ ಒಗ್ಗಟ್ಟಾಗಿವೆ. ನಮಗೆಲ್ಲ ದೇಶ ಮೊದಲು ನಂತರ ಪಕ್ಷ, ಜಾತಿ-ಧರ್ಮ ಎಂದರು.