ದೇಶದ ರಕ್ಷಣೆಯಲ್ಲಿ ಸೈನಿಕರ ಕೊಡುಗೆ ಅಪಾರ

15LNG02
Published on

ಲಿಂಗಸುಗೂರು: ದೇಶದ ರಕ್ಷಣೆಗಾಗಿ ಜೀವನವನ್ನೇ ಮುಡುಪಾಗಿಟ್ಟು ಪರಾಕ್ರಮ ಮೆರೆಯುತ್ತಿರುವ ವೀರಯೋಧರಿಂದಾಗಿ ಭಾರತ ಸುಭದ್ರ ರಾಷ್ಟ್ರವಾಗಿದೆ ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.

ಪಟ್ಟಣದ ಸಾಯಿ ಮಂದಿರದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಎರಡನೇ ವಾರ್ಷೀಕೋತ್ಸವ ಸಮಾರಂಭ ಉದ್ಘಾಟಿಸಿ ಭಾನುವಾರ ಮಾತನಾಡಿದರು. ದೇಶದ ರಕ್ಷಣೆಗಾಗಿ ತಂದೆ, ತಾಯಿ, ಹೆಂಡತಿ, ಮಕ್ಕಳನ್ನು ತೊರೆದು ಭಾರತದ ಗಡಿ ರಕ್ಷಣೆಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ಸೈನಿಕರ ಕೊಡುಗೆ ದೇಶಕ್ಕೆ ಅಪಾರವಾಗಿದೆ ಎಂದರು.

ಜಮ್ಮು-ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟು ಕೊಡಬೇಕೆಂದು ಅಲ್ಲಿನ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಕಾಶ್ಮೀರದಲ್ಲಿ ಶಾಂತಿ ನೆಲೆಸುತ್ತಿದ್ದು, ಕಣಿವೆ ರಾಜ್ಯ ಅಭಿವೃದ್ಧಿಯತ್ತ ಸಾಗುತ್ತಿದೆ. ಮಾಜಿ ಸೈನಿಕರು ಸಂಘಟಿತರಾಗಿ ಸರ್ಕಾರದ ಸೌಲತ್ತು ಪಡೆಯಲು ಮುಂದಾಗಬೇಕು. ಮಾಜಿ ಸೈನಿಕರ ಭವನ ನಿರ್ಮಾಣಕ್ಕೆ ಸರ್ಕಾರಿ ನಿವೇಶನ ಹಾಗೂ ಅನುದಾನ ಒದಗಿಸಲು ಸಹಕಾರ ನೀಡುವುದಾಗಿ ಹೇಳಿದರು.

ಪ್ರಮುಖರಾದ ಎಲ್.ಆರ್.ಮೇಟಿ, ಗಿರಿಮಲ್ಲನಗೌಡ ಪಾಟೀಲ್, ವೀರನಗೌಡ ಲೆಕ್ಕಿಹಾಳ, ಪತ್ರಕರ್ತ ಬಿ.ಎ.ನಂದಿಕೋಲಮಠ, ಹುಲ್ಲೇಶ ಸಾಹುಕಾರ, ಕೆ.ನಾಗಭೂಷಣ, ಶ್ರೀನಿವಾಸ ಕೊಲ್ಲಿ, ಗೋಪಾಲ, ವಿರೂಪಾಕ್ಷಯ್ಯ ಹಿರೇಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net