

ರಾಯಚೂರು: ಯೋಧರು ಗಡಿಯಲ್ಲಿದ್ದು ದೇಶ ಕಾಪಾಡಿದರೆ, ದೇಶದ ಒಳಗಡೆ ಇರುವ ನಾವು ನಮ್ಮ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಕಾಪಾಡುವ ಯೋಧರಾಗಬೇಕು ಎಂದು ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಮುಖ್ಯಸ್ಥೆ ಬಿ.ಕೆ.ಸ್ಮಿತಾ ಹೇಳಿದರು.
ಕಾರ್ಗಿಲ್ ವಿಜಯೋತ್ಸವ ದಿನಾಚರಣೆ ನಿಮಿತ್ತ ನಗರದ ಈಶ್ವರೀಯ ವಿದ್ಯಾಲಯದಲ್ಲಿ ನಿವೃತ್ತ ಯೋಧರಿಗೆ ಸನ್ಮಾನ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು. ಕಾರ್ಗಿಲ್ ವಿಜಯದ ನೆನಪು ಒಂದು ದಿನಕ್ಕೆ ಸೀಮಿತವಾಗಬಾರದು. ದೇಶದ ಬಗ್ಗೆ ಚಿಂತನೆ ಹಾಗೂ ದೇಶಕ್ಕೆ ನಾವು ಕೊಡುವ ಕೊಡುಗೆ ಬಗ್ಗೆ ನಿತ್ಯ ಚಿಂತನೆ ನಡೆಸಬೇಕು ಎಂದರು.
ಸಂವಿಧಾನ ನಮಗೆ ಹಕ್ಕು ಮತ್ತು ಬಾಧ್ಯತೆಗಳನ್ನು ಒದಗಿಸಿದೆ. ಆದರೆ, ನಾವು ಹಕ್ಕುಗಳ ಬಗ್ಗೆ ಮಾತ್ರ ಗಮನಿಸುತ್ತೇವೆ. ಸಮಾಜಕ್ಕೆ ನಮ್ಮಿಂದ ಏನಾದರೂ ಕೊಡುಡೆ ಕೊಟ್ಟಾಗ ದೇಶದ ಅಭಿವೃದ್ಧಿ ಸಾಧ್ಯ. ದೇಶದ ಬಗ್ಗೆ ಗೌರವ, ಪ್ರೀತಿ ತೋರಿಸಬೇಕು ಎಂದು ಬಿ.ಕೆ.ಸ್ಮಿತಾ ತಿಳಿಸಿದರು.
ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಲವಾರು ಯೋಧರ ಬಲಿದಾನದಿಂದ ಕಾರ್ಗಿಲ್ ವಿಜಯ ಸಾಧಿಸಲು ಸಾಧ್ಯವಾಗಿದ್ದು, ಅವರನ್ನು ನೆನೆಯುವ ಕೆಲಸ ಮಾಡಬೇಕು ಎಂದರು. ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ವಿಶ್ವದಲ್ಲಿ ಜನರು ಶಾಂತಿ ಮತ್ತು ಸಂತೋಷದಿಂದ ಇರುವುದು ಭಾರತದಲ್ಲಿ ಮಾತ್ರ. ಅದಕ್ಕೆ ಕಾರಣ ವೀರ ಯೋಧರಾಗಿದ್ದಾರೆ. ಗಡಿಭಾಗದಲ್ಲಿ ಸೈನಿಕರು ಜೀವದ ಹಂಗು ತೊರೆದು ದೇಶವನ್ನು ಕಾಪಾಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ 9, 1971ರ ಯುದ್ಧದಲ್ಲಿ ಭಾಗವಹಿಸಿದ್ದ ನಾಲ್ವರು ಹಾಗೂ 8 ನಿವೃತ್ತ ಯೋಧರನ್ನು ಗೌರವಿಸಲಾಯಿತು. ನಗರಸಭೆ ಸದಸ್ಯ ಜಯಣ್ಣ, ಮಾಜಿ ಸದಸ್ಯ ಜಿ.ಶಿವಮೂರ್ತಿ, ವಕೀಲ ದೇವಣ್ಣ ನಾಯಕ, ಯೋಧರಾದ ಕೆ.ಎಸ್.ರಾವ್, ಗೋಪಾಲ್, ಪತ್ರಕರ್ತ ಚಂದ್ರಕಾಂತ ಮಸಾನಿ ಉಪಸ್ಥಿತರಿದ್ದರು.