

ಯಲಬುರ್ಗಾ: ದಶಕಗಳ ಕಾಲ ಆಡಳಿತ ನಡೆಸಿದರೂ ಅಭಿವೃದ್ಧಿ ಮಾಡದ ಕಾಂಗ್ರೆಸ್ ಪಕ್ಷವನ್ನು ದೇಶದ ಜನ ಮೂಲೆಗುಂಪಾಗಿಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಟೀಕಿಸಿದರು.
ತಾಲೂಕಿನ ಶಿರಗುಂಪಿ, ಕಾತ್ರಾಳ, ಎಚ್.ಸೋಂಪುರ, ಸಂಕನೂರು, ಹಿರೇಮ್ಯಾಗೇರಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ, ಯಾವುದೇ ಕಪ್ಪು ಚುಕ್ಕೆಯಿಲ್ಲದೆ ಆಡಳಿತ ನೀಡುತ್ತಿದ್ದಾರೆ. ರಾಜ್ಯ-ಕೇಂದ್ರ ಸರ್ಕಾರ ಹಲವಾರು ಯೋಜನೆಗಳ ಜಾರಿಯಿಂದ ಜನರ ಹಿತ ಕಾಪಾಡಿದೆ ಎಂದರು.
ಕಳೆದ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಶಿಕ್ಷಣ, ನೀರಾವರಿ ಯೋಜನೆಗೆ ಆದ್ಯತೆ ನೀಡಲಾಗಿದೆ. ಅದರಂತೆ ಕೆರೆಗಳಿಗೆ ನೀರು ಹರಿಸಲಾಗಿದೆ. ಬಸವರಾಜ ರಾಯರಡ್ಡಿ ಮಂತ್ರಿಯಾಗಿದ್ದಾಗ ಕೃಷ್ಣಾ ಬಿಸ್ಕೀಂ ಯೋಜನೆಯನ್ನು ಅನುಷ್ಠಾನ ಮಾಡಲಿಲ್ಲ. ಆದರೆ ಅದನ್ನು ನಾವು ಸಾಕಾರಗೊಳಿಸಿದ್ದೇವೆ.
ಕಾಂಗ್ರೆಸ್‌ನ ಸುಳ್ಳು ಗ್ಯಾರಂಟಿ ಕಾರ್ಡ್ ಅನ್ನು ನಂಬಬೇಡಿ ಎಂದರು. ಮುಖಂಡರಾದ ಹನುಮಂತಪ್ಪ ಹನುಮಾಪುರ, ರತನ್ ದೇಸಾಯಿ ಮಾತನಾಡಿದರು. ಪ್ರಮುಖರಾದ ಬಸಲಿಂಗಪ್ಪ ಭೂತೆ, ಸಿ.ಎಚ್.ಪಾಟೀಲ್, ಅರವಿಂದಗೌಡ ಪಾಟೀಲ್, ವೀರಣ್ಣ ಹುಬ್ಬಳ್ಳಿ, ಶಕುಂತಲಮ್ಮ ಮಾಲಿಪಾಟೀಲ್, ಶರಣಪ್ಪ ಈಳಿಗೇರ್, ಅಯ್ಯನಗೌಡ ಕೆಂಚಮ್ಮನವರ್, ಅಮರೇಶ ಹುಬ್ಬಳ್ಳಿ, ಸಿದ್ದಪ್ಪ ಶಿರಗುಂಪಿ, ದೊಡ್ಡಯ್ಯ ಗುರುವಿನ್ ಇತರರಿದ್ದರು.