ಸುಳ್ಳುಗಳಿಂದ ದೇಶ ಉದ್ಧಾರ ಆಗಲ್ಲ: ಸಂತೋಷ್ ಲಾಡ್

minister santhosh lad press meet
ಸಚಿವ ಸಂತೋಷ್ ಲಾಡ್ ಮಾತನಾಡಿದರು. ಕೆಪಿಸಿಸಿ ವಕ್ತಾರ ಅನಿಲ್ ತಡಕಲ್ ಸುದ್ದಿಗೋಷ್ಠಿಯಲ್ಲಿದ್ದರು.
Published on

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಸುಳ್ಳುಗಳು ಮತ್ತು ರಾಜ್ಯ ಸರ್ಕಾರದ ಗ್ಯಾರಂಟಿಗಳೇ ಕಾಂಗ್ರೆಸ್ ಗೆಲುವಿಗೆ ಸಹಕಾರಿ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.

ದೇಶ ಕಂಡ 14 ಪ್ರಧಾನಿಗಳಲ್ಲಿ ಈ ರೀತಿ ಸುಳ್ಳು ಹೇಳುವವರನ್ನು ನೋಡಿಯೇ ಇಲ್ಲ. ಹತ್ತು ವರ್ಷ ಅಧಿಕಾರ ನಡೆಸಿದ ನರೇಂದ್ರ ಮೋದಿಗೆ ಮತ ಕೇಳಲು ವಿಷಯಗಳೇ ಇಲ್ಲದಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ, ಮುಸ್ಲಿಮರು ಮತ್ತು ರಾಮಮಂದಿರ ಬಿಟ್ಟರೆ ಬೇರೆ ವಿಚಾರಗಳ ಬಗ್ಗೆ ಮಾತನಾಡುತ್ತಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಲೇವಡಿ ಮಾಡಿದರು.
ದಶಕದ ಅವಧಿಯಲ್ಲಾದ ಕೆಲಸಗಳ ಆಧಾರದ ಮೇಲೆ ಮತ ಕೇಳಲು ಅವರಿಗೆ ಆಗುತ್ತಿಲ್ಲ. 70 ವರ್ಷ ದೇಶದಲ್ಲಿ ಅಧಿಕಾರ ನಡೆಸಿರುವ ಕಾಂಗ್ರೆಸ್ ಯಾರ ಮಂಗಳಸೂತ್ರವನ್ನೂ ಕಿತ್ತು ಮಾರಾಟ ಮಾಡಿಲ್ಲ. 2014ರಲ್ಲಿ ಒಂದು ತೊಲ ಬಂಗಾರದ ಬೆಲೆ 24 ಸಾವಿರ ರೂ. ಇತ್ತು. ಇಂದು 75 ಸಾವಿರ ರೂ. ಆಗಿದೆ. ಗ್ಯಾಸ್ ದರ 400 ಇದ್ದಿದ್ದು ಒಂದು ಸಾವಿರ ರೂ. ಆಗಿದೆ. ಈ ಬಗ್ಗೆ ಪ್ರಧಾನಿ ಉತ್ತರ ಕೊಡಬೇಕಿದೆ ಎಂದರು.
10 ವರ್ಷ ಪ್ರಧಾನಿ ಆಗಿದ್ದವರು ಈ ದೇಶದಲ್ಲಿ ಹಿಂದುಗಳು ಸಂಕಷ್ಟದಲ್ಲಿದ್ದಾರೆಂದು ಹೇಳುತ್ತಿರುವುದು ದುರದೃಷ್ಟಕರ. ಅವರೇ 10 ವರ್ಷ ಆಡಳಿತ ಮಾಡಿದರೂ ಹಿಂದುಗಳು ಯಾಕೆ ಆತಂಕದಲ್ಲಿದ್ದಾರೆ ಎಂದು ಪ್ರಶ್ನಿಸಿದರು. ಕೇವಲ ಬಟ್ಟೆ ಬದಲಿಸಿಕೊಂಡು ಸುಳ್ಳು ಭಾಷಣ ಮಾಡಿದರೆ ದೇಶ ಉದ್ಧಾರ ಆಗುವುದಿಲ್ಲ ಎಂದು ತಿಳಿಸಿದರು.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಒಟ್ಟು 117 ಪತ್ರಿಕಾಗೋಷ್ಠಿ ನಡೆಸಿದ್ದರು. ಮೋದಿ ಅವರು ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸಿಲ್ಲ. ಇವರ ಮಾಧ್ಯಮ ನಿರ್ವಹಣೆಗೆ 6,500 ಕೋಟಿ ರೂ. ವ್ಯಯ ಮಾಡಲಾಗಿದೆ. ಅವರು ತಮಗೆ ಬೇಕಾದಂತೆ ಪ್ರಚಾರ ಮಾಡುತ್ತಿದ್ದಾರೆಂದು ಆರೋಪಿಸಿದ ಸಂತೋಷ್ ಲಾಡ್, ಪ್ರಧಾನಿ ಮಾಧ್ಯಮಗೋಷ್ಠಿ ನಡೆಸಬೇಕು. ಅಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಬೇಕು. ಸಂವಾದ, ಚರ್ಚೆಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.
ಕೆಪಿಸಿಸಿ ವಕ್ತಾರ ಅನಿಲ್ ತಡಕಲ್, ಪ್ರಮುಖರಾದ ಕಲಗೋಡು ರತ್ನಾಕರ್, ಎಸ್.ಕೆ.ಮರಿಯಪ್ಪ, ಎಸ್.ರವಿಕುಮಾರ್, ಸಿ.ಎಸ್.ಚಂದ್ರಭೂಪಾಲ್, ಜಿ.ಡಿ.ಮಂಜುನಾಥ್, ಕೆ.ರಂಗನಾಥ್ ಸುದ್ದಿಗೋಷ್ಠಿಯಲ್ಲಿದ್ದರು.

ಚುನಾವಣೆಗಾಗಿ ಗೊಂದಲ ಸೃಷ್ಟಿ
ಪ್ರಧಾನಿ ನರೇಂದ್ರ ಮೋದಿ ಅವರದು ಯಾವುದೂ ವರಿಜಿನಲ್ ಅಲ್ಲ. ಬಿಜೆಪಿಯವರು ನಮ್ಮ ಗ್ಯಾರಂಟಿಗಳ ಬದಲಾಗಿ ಮೋದಿ ಗ್ಯಾರಂಟಿ ಎನ್ನುತ್ತಿದ್ದಾರೆ. ಗೊಂದಲ ಸೃಷ್ಟಿಸದೆ ಅವರಿಗೆ ಚುನಾವಣೆ ನಡೆಸಲು ಸಾಧ್ಯವೇ ಆಗಲ್ಲ. ನೀತಿ ಆಯೋಗದ ಪ್ರಕಾರ ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ ಶೂನ್ಯ ಬಜೆಟ್ ನೀಡಿದ್ದೇ ಅವರ ಸಾಧನೆಯಾಗಿದೆ ಎಂದು ಸಚಿವ ಸಂತೋಷ್ ಲಾಡ್ ಟೀಕಿಸಿದರು. 2004-2014 ಮತ್ತು 2014-2024ರ ಅವಧಿಯಲ್ಲಿ ಆರ್ಥಿಕ ವ್ಯವಸ್ಥೆ ಬಗ್ಗೆ ಚರ್ಚೆ ಮಾಡಬೇಕಿದೆ. ಮೋದಿ ಅವರು ಆಡಳಿತಕ್ಕೆ ಬಂದ ಮೇಲೆ ದೇಶ ಸರ್ವಾಧಿಕಾರಿ ಆಡಳಿತದತ್ತ ವಾಲಿದೆ. ಮತ್ತೆ ಗೆದ್ದರೆ ಇಂಡಿಯಾ ಸರ್ವಾಧಿಕಾರಿ ದೇಶವಾಗುವುದರಲ್ಲಿ ಅನುಮಾನವಿಲ್ಲ ಎಂದರು. ಚುನಾವಣಾ ಬಾಂಡ್ ವಂಚನೆ ಸಾಮಾನ್ಯ ಜನರಿಗೆ ಅರ್ಥ ಮಾಡಿಸುವುದು ಕಷ್ಟವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net