ದೇಶದ ಯೋಧರಲ್ಲಿ ಹೊಸ ಹುರುಪು

dj dvg huthatma smaraka
Published on

ದಾವಣಗೆರೆ: ನನ್ನ ಮಣ್ಣು ನನ್ನ ದೇಶ ಅಭಿಯಾನ ಪ್ರತಿಯೊಬ್ಬ ಪ್ರಜೆಗೂ ಸ್ಫೂರ್ತಿ ತುಂಬಲಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.

ನಗರದ ಅಮರ್ ಜವಾನ್ ಉದ್ಯಾನವನದಲ್ಲಿರುವ ಹುತಾತ್ಮ ಸೈನಿಕರ ಸ್ಮಾರಕಕ್ಕೆ ಸೋಮವಾರ ಪುಷ್ಪಾರ್ಚನೆ ಮಾಡಿ ಮಾತನಾಡಿ,

ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸೂಚನೆಯ ಮೇರೆಗೆ ನನ್ನ ಮಣ್ಣು ನನ್ನ ದೇಶ ಅಭಿಯಾನವನ್ನು ಜಿಲ್ಲೆಯಲ್ಲಿ ಆರಂಭಿಸಿದ್ದೇವೆ ಎಂದರು.

ಜಿಲ್ಲೆಯ ಎಲ್ಲ ಬೂತ್ ಮಟ್ಟದಲ್ಲಿ ಸಂಗ್ರಹಿಸುವ ಮಣ್ಣನ್ನು, ಬೆಂಗಳೂರಿಗೆ ಕಳುಹಿಸಲಾಗುವುದು. ಅಲ್ಲಿಂದ ದೆಹಲಿಗೆ ಕಳುಹಿಸಲಿದ್ದಾರೆ.

ಜಿಲ್ಲಾ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಉದ್ಯಾನವನದ ಸುತ್ತಮುತ್ತಲಿನ ಐದು ಮನೆಗಳಿಗೆ ತೆರಳಿ ಮನೆ ಅಂಗಳದ ಮಣ್ಣು ಸ್ವೀಕರಿಸಿದರು.

ಪ್ರತಿ ಮನೆಯಿಂದ ಮಣ್ಣು ಸಂಗ್ರಹ: ನನ್ನ ದೇಶ ನನ್ನ ಮಣ್ಣು ಅಭಿಯಾನ ದೇಶದ ಪ್ರತಿಯೊಬ್ಬ ಪ್ರಜೆಯಲ್ಲಿಯೂ ರಾಷ್ಟ್ರೀಯ ಐಕ್ಯತೆ ಭಾವ ಮೂಡಿಸುತ್ತದೆ.

ಈಡೀ ದೇಶದ ಪ್ರತಿ ಮನೆಯ ಅಂಗಳದಿಂದ ಸಂಗ್ರಹಿಸಿದ ಮಣ್ಣನ್ನು ಒಟ್ಟುಗೂಡಿಸಿ ದೆಹಲಿಯ ಕರ್ತವ್ಯ ಪಾತ್‌ಗೆ ಕಳುಹಿಸಲಾಗುವುದು.

ಅಲ್ಲಿ ಇದೇ ಮಣ್ಣಿನಿಂದ ಸುವರ್ಣ ಉದ್ಯಾನವನ ನಿರ್ಮಿಸಲಾಗುವುದು. ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಈಗಾಗಲೇ ಮಣ್ಣು ಸಂಗ್ರಹದಲ್ಲಿ ತೊಡಗಿಸಿಕೊಂಡಿದ್ದಾರೆ.

ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಅಭಿಯಾನಕ್ಕೆ ಕರೆ ಕೊಟ್ಟಿದ್ದರು. 10 ದಿನಗಳ ಅವಧಿಯಲ್ಲಿ ಅಭಿಯಾನ ಪೂರ್ಣಗೊಳ್ಳಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಎಸ್.ಹನಗವಾಡಿ ಹೇಳಿದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್ ಪ್ರತಿಜ್ಞಾವಿಧಿ ಬೋಧಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ, ಅಭಿಯಾನದ ಸಂಚಾಲಕ ರಾಜನಹಳ್ಳಿ ಶಿವಕುಮಾರ್, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್,

ಕೆಂ.ಎಂ.ಸುರೇಶ್, ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನ ಕುಮಾರ್, ಎಸ್.ಟಿ.ವೀರೇಶ್, ಕೆ.ಎಂ.ವೀರೇಶ್, ಗಾಯತ್ರಿ ಬಾಯಿ ಖಂಡೋಜಿರಾವ್,

ರೇಖಾ ಸುರೇಶ್ ಗಂಡಗಾಳೆ, ಸೋಗಿ ಶಾಂತಕುಮಾರ್, ಲೋಕಿಕೆರೆ ನಾಗರಾಜ್ ಇದ್ದರು.

ಎರಡೂವರೆ ತಿಂಗಳು ಮೌನ!: ಮುಂದಿನ ಎರಡೂವರೆ ತಿಂಗಳು ಯಾವುದರ ಬಗ್ಗೆಯೂ ಮಾತನಾಡಲ್ಲ. ಮೌನವಹಿಸಲಿದ್ದೇನೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದ್ದಾರೆ.

ಮಾಜಿ ಸಚಿವ ರೇಣುಕಾಚಾರ್ಯ ಸ್ವಪಕ್ಷ ಹಾಗೂ ಸಂಸದರ ವಿರುದ್ಧ ಮಾತನಾಡುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ಕೇಳಿದ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಬಿ.ಎಸ್.ಯಡಿಯೂರಪ್ಪನವರೇ ಇನ್ನು ಮೂರು ತಿಂಗಳು ಏನೂ ಮಾತನಾಡಬೇಡಿ ಎಂದು ಹೇಳಿದ್ದಾರೆ.

ಹೀಗಾಗಿ, ನಾನು ಕಾರ್ಯಕ್ರಮಕ್ಕೆ ಸಂಬಂಧ ಪಟ್ಟ ವಿಚಾರ ಬಿಟ್ಟು ಬೇರೆ ಏನನ್ನು ಮಾತನಾಡುವುದಿಲ್ಲ ಎಂದು ಹೇಳಿದರು.

ನನಗೆ ಎಲ್ಲವುದಕ್ಕೂ ಉತ್ತರ ಕೊಡುವ ಶಕ್ತಿ ಇದೆ. ಚುನಾವಣೆಗೆ ಇನ್ನು ಆರೂವರೆ ತಿಂಗಳುಗಳಿವೆ. ಮೂರು ತಿಂಗಳ ಬಳಿಕ ಸುದ್ದಿಗೋಷ್ಠಿ ನಡೆಸಿ ಎಲ್ಲದಕ್ಕೂ ಉತ್ತರ ಕೊಡಲಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net