ದೇಶ ಮತ್ತು ಧರ್ಮ ಮನುಷ್ಯನ ಎರಡು ಕಣ್ಣು

oplus_2
oplus_2
Published on

ಹುಬ್ಬಳ್ಳಿ: ದೇಶ ಮತ್ತು ಧರ್ಮ ಮನುಷ್ಯನ ಎರಡು ಕಣ್ಣು. ದೇಶ ಉಳಿದರೆ ಧರ್ಮ ಸಂಸ್ಕೃತಿ ಉಳಿದು ಬೆಳೆದು ಬರಲು ಸಾಧ್ಯ. ದೇವರ ಮೇಲಿನ ನಂಬಿಕೆ ಬಾಳಿಗೆ ಶಾಶ್ವತ ಆಶಾದೀಪ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ತಾಲೂಕಿನ ಪಾಲಿಕೊಪ್ಪ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಮತ್ತು ಶ್ರೀ ಕರಿಯಮ್ಮದೇವಿ ನೂತನ ದೇವಸ್ಥಾನದ ಲೋಕಾರ್ಪಣೆ, ನೂತನ ಗೋಪುರ ಕಳಸಾರೋಹಣ, ಪ್ರಾಣ ಪ್ರತಿಷ್ಠಾಪನೆ, ಶ್ರೀ ನಂದೀಶ್ವರ ಸ್ವಾಮಿ ಮಹಾರಥೋತ್ಸವ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಭಾವೈಕ್ಯತೆ ಮತ್ತು ಅಧ್ಯಾತ್ಮ ಜ್ಞಾನ ಭಾರತದ ಉಸಿರು. ಆಧುನಿಕ ಯುಗದಲ್ಲಿ ಪ್ರಗತಿಪರ ವಿಚಾರ ಧಾರೆಗಳ ಹೆಸರಿನಲ್ಲಿ ಭಾರತೀಯ ಉತ್ಕೃಷ್ಟ ಸಂಸ್ಕೃತಿ ನಾಶ ಮಾಡುವ ಸಂಚು ನಡೆಯುತ್ತಿದೆ. ದೇಹವನ್ನು ದುಡಿಮೆಗೆ, ಮನಸ್ಸನ್ನು ಭಗವಂತನಿಗೆ ಅರ್ಪಿಸಿ ನಡೆದಾಗ ಜೀವನ ಸಾರ್ಥಕ. ಸುಖದ ಮೂಲ ಧರ್ಮ ಪರಿಪಾಲನೆಯಲ್ಲಿದೆ. ಮಾನವ ಪರಿಪೂರ್ಣದೆಡೆಗೆ ಪಯಣಿಸುವುದೇ ನಿಜವಾದ ಧರ್ಮ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ದಯಾ, ಕ್ಷಮಾ, ದಾನ, ಪೂಜಾ ಮತ್ತು ಧ್ಯಾನ ಎಂಬ ದಶಸೂತ್ರಗಳು ಎಲ್ಲರ ಬಾಳಿಗೆ ದಾರಿದೀಪ. ವೀರಶೈವ ಧರ್ಮ ಕಾಯಕ ಮತ್ತು ದಾಸೋಹದ ಮೂಲಕ ಭಾವೈಕ್ಯತೆ ಸಾಮರಸ್ಯ ಬೆಳೆಸಲು ಪ್ರಯತ್ನಿಸಿದೆ ಎಂದರು.
ಮುಕ್ತಿಮಂದಿರ ಕ್ಷೇತ್ರದ ಶ್ರೀ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ನೇತೃತ್ವ ವಹಿಸಿದ್ದರು. ಕಲಾದಗಿಯ ಶ್ರೀ ಗಂಗಾಧರ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು.
ಶ್ರೀ ಶಿವಾನಂದಸ್ವಾಮಿ ಹಿರೇಮಠ, ಶ್ರೀ ಕುಮಾರಸ್ವಾಮಿ ಹಿರೇಮಠ, ದೇವನಗೌಡ ಪಾಟೀಲ, ಗಂಗನಗೌಡ ಪಾಟೀಲ, ಶಿವನಗೌಡ ಧರ್ಮಗೌಡ್ರ, ನಾಗರಾಜ ಅಂಗಡಿ, ಶ್ರೀಕಂಠಗೌಡ್ರು ಹಿರೇಗೌಡ್ರ, ಮುದಕಪ್ಪ ಹರಕುಣಿ, ಬಿ.ಸಿ. ಕರಿಯಣ್ಣನವರ, ಭರಮಪ್ಪ ಮುಗಳಿ, ಸಿ.ವೈ.ಹಿರೇಗೌಡ್ರ, ಚನ್ನಪ್ಪ ಕಮಡೊಳ್ಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net