

ದಾವಣಗೆರೆ: ಸ್ವತಂತ್ರ ಭಾರತ ಕಳೆದ 75 ವರ್ಷಗಳಲ್ಲಿ ಮಾಡಿರುವ ಸಾಧನೆಯನ್ನು ಬೆಳೆಯುತ್ತಿರುವ ಜನಸಂಖ್ಯೆ ತಿಂದು ಹಾಕುತ್ತಿದೆ ಎಂದು ವಿಜಯವಾಣಿ ಅಂಕಣಕಾರ ಪ್ರೊ.ಪ್ರೇಮಶೇಖರ್ ಬೇಸರ ವ್ಯಕ್ತಪಡಿಸಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ದಾವಣಗೆರೆ ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ವಿವಿಯ ಎಂಬಿಎ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಭಾರತ 75; ಸೋಲು-ಗೆಲುವುಗಳ ಏರಿಳಿತ’ ಕುರಿತು ವಿಶೇಷ ಉಪನ್ಯಾಸ ನೀಡಿದರು.
ವಿವಿಧ ಕ್ಷೇತ್ರಗಳಲ್ಲಿ ಏನೆಲ್ಲ ಅಭಿವೃದ್ಧಿ ಆಗಿದ್ದರೂ ನಿರುದ್ಯೋಗ ನಿರ್ಮೂಲನೆ ಸುಲಭವಲ್ಲ. ‘ಅಜ್ಜಿ ನೂತಿದ್ದೆಲ್ಲ ಅಜ್ಜನ ಉಡದಾರಕ್ಕೆ’ ಎನ್ನುವಂತಾಗಿದೆ. ಈ ಪ್ರಮಾಣದ ವರೆಗೆ ಜನಸಂಖ್ಯೆಯನ್ನು ಬೆಳೆಯಲು ಬಿಟ್ಟಿದ್ದು ತಪ್ಪು ಎಂದು ಅಭಿಪ್ರಾಯಪಟ್ಟರು.
ಆಹಾರ ಧಾನ್ಯಗಳ ಉತ್ಪಾದನೆ, ಅಣುಶಕ್ತಿ, ಔಷಧ ಉದ್ಯಮ ಸೇರಿ ಹಲವು ಕ್ಷೇತ್ರಗಳಲ್ಲಿ ಅದ್ಭುತ ಸಾಧನೆಗಳಾಗಿವೆ. ಕೋವಿಡ್ ನಿಯಂತ್ರಿಸಲು ಜಗತ್ತಿನಲ್ಲೇ ಶೇ. 60 ರಷ್ಟು ಲಸಿಕೆಯನ್ನು ಉತ್ಪಾದಿಸಿದ್ದು ಭಾರತದ ಹೆಗ್ಗಳಿಕೆಯಾಗಿದೆ, 170 ದೇಶಗಳಿಗೆ ವ್ಯಾಕ್ಸಿನ್ ಪೂರೈಕೆ ಮಾಡಿದ್ದು ಕಡಿಮೆ ಸಾಧನೆಯೇನಲ್ಲ ಎಂದರು.
ವೀರ ಸಾವರ್ಕರ್ ಬ್ರಿಟಿಷರ ವಿರುದ್ಧ ಧ್ವನಿ ಎತ್ತಿದ್ದು, ಅದೇ ಕಾರಣಕ್ಕೆ ಅವರನ್ನು ಅಂಡಮಾನ್ ಜೈಲಿಗೆ ಹಾಕಿದ್ದು, ಸುಭಾಷ್‌ಚಂದ್ರ ಬೋಸ್ ವಹಿಸಿದ ಪಾತ್ರದ ಬಗ್ಗೆ ಪ್ರಸ್ತಾಪಿಸಿದರು. ಸ್ವಾತಂತ್ರೃ ತಂದಿದ್ದೇ ಕಾಂಗ್ರೆಸ್ ಎನ್ನುವಂತೆ ಬಿಂಬಿಸಲಾಯಿತು ಎಂದ ಅವರು, ಸರ್ದಾರ್ ವಲ್ಲಭಭಾಯಿ ಪಟೇಲ್ ದೇಶದ ಮೊದಲ ಪ್ರಧಾನಿ ಆಗಬೇಕಿತ್ತು, ಆದರೆ, ಪ್ರಜಾಪ್ರಭುತ್ವ ವಿರೋಧಿ ವಿಧಾನದಲ್ಲಿ ನೆಹರು ಅಧಿಕಾರಕ್ಕೆ ಬಂದರು ಎಂದು ತಿಳಿಸಿದರು.
ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ಡಾ.ಕೆ.ಎಸ್.ಮೀನಾಕ್ಷಿ ಮಾತನಾಡಿ, ಬದಲಾದ ಆಹಾರ ಪದ್ಧತಿ ಮತ್ತು ಜೀವನ ಶೈಲಿಯಿಂದಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ಯೋಗ, ವ್ಯಾಯಾಮಗಳನ್ನು ನಿಯಮಿತವಾಗಿ ಮಾಡಬೇಕು ಎಂದು ಹೇಳಿದರು.
ಕುಲಪತಿ ಪ್ರೊ. ಬಿ.ಡಿ. ಕುಂಬಾರ ಮಾತನಾಡಿ, ವಿದ್ಯಾರ್ಥಿಗಳು ಪ್ರಾಪಂಚಿಕವಾಗಿ ಎಲ್ಲ ವಿಷಯಗಳನ್ನು ತರಗತಿಯಲ್ಲಿ ಕಲಿಯಲು ಸಾಧ್ಯವಿಲ್ಲ, ಬಲ್ಲವರಿಂದ ಕೇಳಿ, ಪುಸ್ತಕಗಳನ್ನು ಓದಿ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿವಿಯ ರಾಷ್ಟೀಯ ಸೇವಾ ಯೋಜನೆ ಘಟಕದ ಸಂಯೋಜನಾಧಿಕಾರಿ ಡಾ. ಅಶೋಕ ಕುಮಾರ್ ವಿ. ಪಾಳೇದ ಇದ್ದರು.
ಇಂದಿರಾ ಹಾದಿಯಲ್ಲಿ ಮೋದಿ ನಡೆ
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅತ್ಯುತ್ತಮ ನಾಯಕಿಯಾಗಿದ್ದರು ಎಂದು ಪಾಕಿಸ್ತಾನದ ವಿಭಜನೆಯಲ್ಲಿ ಅವರು ವಹಿಸಿದ ಪಾತ್ರ, ತೆಗೆದುಕೊಂಡ ನಿರ್ಧಾರವನ್ನು ಪ್ರೊ.ಪ್ರೇಮಶೇಖರ್ ಪ್ರಶಂಸಿಸಿದರು. ಇಂದಿರಾ ಗಾಂಧಿ ಮಾಡಿದ್ದನ್ನೇ ಈಗಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೊಡ್ಡ ಮಟ್ಟದಲ್ಲಿ ಮಾಡುತ್ತಿದ್ದಾರೆ. ಚೀನಾ ದೇಶಕ್ಕೆ ತಕ್ಕ ಉತ್ತರ ನೀಡಿದ್ದಾರೆ. ಪಾಕಿಸ್ತಾನವನ್ನು ರಾಜತಾಂತ್ರಿಕವಾಗಿ ಕಟ್ಟಿ ಹಾಕಿದ್ದಾರೆ. ಕಳೆದ 8 ವರ್ಷಗಳಲ್ಲಿ ಭಾರತದ ಚಿತ್ರಣವನ್ನು ಬದಲಿಸಿದ್ದಾರೆ ಎಂದು ವಿವರಿಸಿದರು.