

ಮೈಸೂರು: ಕೃತಕ ಬುದ್ಧಿಮತ್ತೆ ಎಂಬ ಈ ಆಧುನಿಕ ತಂತ್ರಜ್ಞಾನ ಪ್ರಣೀತ ಸ್ಥಿತ್ಯಂತರವು ಮಾನವ ಜನಾಂಗಕ್ಕೆ ಪೂರಕವೋ, ಮಾರಕವೋ ಅನ್ನುವುದನ್ನು ನಾವು ಕಾದು ನೋಡಬೇಕಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಂ.ಜಿ.ಶುಕುರ್ ಕಮಲ್ ಅಭಿಪ್ರಾಯಪಟ್ಟರು.
ನಗರದ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಪ್ರೊ.ಪಿ.ಎಂ.ಚಿಕ್ಕಬೋರಯ್ಯ ಸ್ಮರಣಾರ್ಥ ಶನಿವಾರ ಏರ್ಪಡಿಸಿದ್ದ ‘ಕೃತಕ ಬುದ್ಧಿಮತ್ತೆ ಮತ್ತು ನ್ಯಾಯ ವ್ಯವಸ್ಥೆ: ಉದಯೋನ್ಮುಖ ಪ್ರವೃತ್ತಿಗಳು’ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ತಂತ್ರಜ್ಞಾನದ ಮೇಲೆ ಏಕಸ್ವಾಮ್ಯ ಮತ್ತು ಹಿಡಿತ ಸಾಧಿಸಿರುವ ರಾಷ್ಟ್ರಗಳೇ ಇವತ್ತು ಅತ್ಯಂತ ಶಕ್ತಿಶಾಲಿ ದೇಶಗಳು ಎಂದು ಗುರುತಿಸಿಕೊಂಡಿರುವ ಈ ಹೊತ್ತಿನಲ್ಲಿ ಕೃತಕ ಬುದ್ಧಿಮತ್ತೆ ಎಂಬುದು ಅಂಥ ರಾಷ್ಟ್ರಗಳ ಕೈಗೆ ಸಿಕ್ಕಿದರೆ ಏನಾಗಬಹುದು ಎಂಬುದನ್ನು ಅರಿಯಲು ಹೊರಟರೆ ಗಾಬರಿಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಮನುಷ್ಯ, ನದಿ, ಬೆಟ್ಟಗುಡ್ಡಗಳನ್ನೆಲ್ಲ ವ್ಯಕ್ತಿತ್ವದ ಭಾಗವಾಗಿ ನೋಡುತ್ತಿರುವ ಹೊತ್ತಿನಲ್ಲಿಯೇ ಯುಎಇ ದೇಶವು ಸೋಫಿಯಾ ಎಂಬ ರೊಬಾಟ್‌ಗೆ ನಾಗರಿಕ ಹಕ್ಕುಗಳನ್ನು ನೀಡಿತು. ಈಗಾಗಲೇ ಚಾಲಕ ರಹಿತ ಕಾರುಗಳು ರಸ್ತೆಯಲ್ಲಿ ಓಡಾಡುತ್ತಿವೆ. ವಕೀಲರು, ನ್ಯಾಯಾಧೀಶರಿಲ್ಲದೆ ಬರೀ ಎಐ ತಂತ್ರಜ್ಞಾನವನ್ನು ಇಟ್ಟುಕೊಂಡೆ ಮುಂದಿನ ದಿನಗಳಲ್ಲಿ ಕೋರ್ಟ್ ಕಲಾಪಗಳು ನಡೆಯುವ ದಿನಗಳು ದೂರವಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.
ಕೃತಕ ಬುದ್ಧಿಮತ್ತೆಯನ್ನು ಪಾಶ್ಚಿಮಾತ್ಯ ದೇಶಗಳು ತಮ್ಮ ನಿತ್ಯದ ನ್ಯಾಯಾಂಗ ವಿಚಾರಣಾ ಪ್ರಕ್ರಿಯೆಗಳಲ್ಲಿ ಈಗಾಗಲೇ ಅಳವಡಿಸಿಕೊಂಡು ತೀರ್ಪು ನೀಡುವ ಸಾಧ್ಯತೆಗಳತ್ತ ಮುಖಮಾಡಿವೆ. ಭಾರತದಲ್ಲಿ ವಕೀಲರು, ನ್ಯಾಯಾಧೀಶರ ಸ್ಥಾನಗಳನ್ನು ಇದು ಹೇಗೆ ತುಂಬಬಲ್ಲದು ಎಂಬುದನ್ನು ನಾವು ಕಾದು ನೋಡಬೇಕಿದೆ ಎಂದರು.
ಭಾರತದ ನ್ಯಾಯಾಂಗ ವ್ಯವಸ್ಥೆಯು ಅಷ್ಟಾಗಿ ಆಧುನಿಕ ತಂತ್ರಜ್ಞಾನವನ್ನು ಅವಲಂಬಿಸಲು ಹೋಗಿಲ್ಲ. ತಂತ್ರಜ್ಞಾನದ ನೆರವಿಲ್ಲದೆಯೇ ಮನುಷ್ಯರ ವಾದಮಂಡನೆಯ ಮೇಲೆಯೇ ಮನುಷ್ಯರೇ ತೀರ್ಪು ಕೊಡುವ ಸಂದರ್ಭಗಳನ್ನು ನಾವು ನೋಡುತ್ತಿದ್ದೇವೆ. ನ್ಯಾಯ ನೀಡಿಕೆಯ ವ್ಯವಸ್ಥೆಗೆ ತಂತ್ರಜ್ಞಾನದ ಮೂಗು ತೂರಿಸುವಿಕೆಯನ್ನು ಅಲ್ಲಗಳೆಯುವಂತೆಯೂ ಇಲ್ಲ, ಆ ಸಾಧ್ಯತೆ ಘಟಿಸುವುದನ್ನು ನಿರಾಕರಿಸುವಂತೆಯೂ ಇಲ್ಲ ಎಂದು ಅಭಿಪ್ರಾಯಪಟ್ಟರು.
ನ್ಯಾಯ ನೀಡಿಕೆ ಪ್ರಕ್ರಿಯೆಯಲ್ಲಿ ಮನುಷ್ಯರು ಎಸಗಬಹುದಾದ ತಪ್ಪುಗಳನ್ನು ಮನುಷ್ಯರೇ ಸರಿಪಡಿಸಬಹುದಾದ ಸಾಧ್ಯತೆಗಳು ನಮ್ಮಲ್ಲಿ ಹೇರಳವಾಗಿವೆ. ಆದರೆ ತಂತ್ರಜ್ಞಾನ ಎಸಗುವ ತಪ್ಪುಗಳನ್ನು ಈ ಮನುಷ್ಯ ಜಗತ್ತು, ನ್ಯಾಯಿಕ ವ್ಯವಸ್ಥೆ ಹೇಗೆ ಎದುರಿಸಲಿದೆ ಎಂಬುದು ನಿಜಕ್ಕೂ ಸವಾಲಿನ ವಿಷಯ. ಭಾರತ ಇವತ್ತಲ್ಲ ನಾಳೆ ಕೃತಕ ಬುದ್ಧಿಮತ್ತೆಗೆ ತೆರೆದುಕೊಳ್ಳಲೇಬೇಕಾದ ಅನಿವಾರ್ಯತೆ ಬರಲಿದೆ. ಅದಕ್ಕೆ ಎಲ್ಲ ರೀತಿಯಿಂದಲೂ ಸಜ್ಜುಗೊಳ್ಳಬೇಕು ಎಂದು ಸಲಹೆ ನೀಡಿದರು.
ಬೆಂಗಳೂರು ವಿವಿ ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ.ವಿ.ಸುದೇಶ್ ಮಾತನಾಡಿ, ನ್ಯಾಯಾಲಯದ ಆವರಣಕ್ಕೆ ಕೃತಕ ಬುದ್ಧಿಮತ್ತೆಯು ಕಾಲಿಡುವುದನ್ನು ನಾವು ಸ್ವಾಗತಿಸಲೇಬೇಕಿದೆ. ಇದರಿಂದಾದರೂ ಪ್ರತಿದಿನ, ಪ್ರತಿವರ್ಷ ತೀರ್ಪು, ಇತ್ಯರ್ಥಗಳನ್ನು ಕಾಣದೇ ಬ್ಯಾಕ್‌ಲಾಗ್ ರೂಪದಲ್ಲಿ ಕೊಳೆಯುತ್ತಿರುವ ಲಕ್ಷಾಂತರ ಕೇಸುಗಳಿಗೆ ಮುಕ್ತಿ ಸಿಕ್ಕು ಅವು ತುರ್ತು ವಿಲೇವಾರಿ ಕಾಣಬಹುದು. ಭಾರತದ ನ್ಯಾಯ ವ್ಯವಸ್ಥೆಗೆ ಅತ್ಯಂತ ತುರ್ತಾಗಿ ಕೃತಕ ಬುದ್ಧಿಮತ್ತೆಯಿಂದ ಆಗಲೇಬೇಕಿರುವ ಕೆಲಸ ಎಂದರೆ ಇದೆ ಎಂದರು.
ಸಮಾನತೆ, ಸಾಮಾಜಿಕ ನ್ಯಾಯ, ಮೂಲಭೂತ ಹಕ್ಕುಗಳಂತಹ ಸಾಂವಿಧಾನಿಕ ಮೌಲ್ಯಗಳ ಮೇಲೆ ನಿಂತಿರುವ ಭಾರತಕ್ಕೆ ಕೃತಕ ಬುದ್ಧಿಮತ್ತೆಯಂತಹ ಆಧುನಿಕ ತಂತ್ರಜ್ಞಾನದಿಂದ ಅಪಾಯ ಎದುರಾಗದಿದ್ದರೆ ಅದು ನಿಜಕ್ಕೂ ಪ್ರಜಾಪ್ರಭುತ್ವದ ಗೆಲುವು. ಇಲ್ಲಿ ಜಾತಿ, ಧರ್ಮ, ಮತಗಳೆಲ್ಲವೂ ಮನುಷ್ಯನ ಮೂಲಭೂತ ಆಸ್ಮಿತೆಯಾಗಿರುವುದರಿಂದ ಅದಕ್ಕೆ ಕೃತಕ ಬುದ್ಧಿಮತ್ತೆಯು ಹೇಗೆ ಮುಖಾಮುಖಿ ಆಗಬಹುದು ಎನ್ನುವ ಕುತೂಹಲ ಇದೆ ಎಂದರು.
ಕಳೆದ ವರ್ಷ ನಡೆದ ಪ್ರೊ.ಪಿ.ಎಂ.ಚಿಕ್ಕಬೋರಯ್ಯ ನೆನಪಿನ ಉಪನ್ಯಾಸ ಮಾಲೆ -5ರ ವಿಶೇಷ ಸಂಚಿಕೆ ಬಿಡುಗಡೆ ಮಾಡಲಾಯಿತು.
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ವಿವಿಎಸ್ ಆಡಳಿತ ಮಂಡಳಿ ಸದಸ್ಯ ಶಿವಲಿಂಗಯ್ಯ, ಪ್ರಾಂಶುಪಾಲರಾದ ಡಾ.ಪಿ.ದೀಪು, ಕಾರ್ಯಕ್ರಮದ ಸಂಯೋಜಕ ಡಾ.ಎಸ್.ಬಿ.ಬೋರೇಗೌಡ, ಡಾ.ಎ.ಆರ್.ಪ್ರಕೃತಿ, ಡಾ.ಕೆ.ಎಲ್.ಚಂದ್ರಶೇಖರ್, ಡಾ.ಶ್ರೀದೇವಿ ಕೃಷ್ಣ ಇದ್ದರು.