

ಮಡಿಕೇರಿ:
ಬುಧವಾರ ನಡೆದ ರಾಜ್ಯ ವಿಧಾನಸಭೆ ಚುನಾವಣೆಯ ಮತ ಎಣಿಕೆ ಶುಕ್ರವಾರ (ಮೇ೧೩) ನಡೆಯಲಿದೆ. ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ತಯಾರಿ ನಡೆಸಲಾಗಿದೆ.
ನಗರದ ಸಂತ ಜೋಸೆಫರ ಶಾಲೆಯಲ್ಲಿ ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರಗಳ ಮತ ಎಣಿಕೆ ಬೆಳಗ್ಗೆ ೮ ಗಂಟೆಗೆ ಆರಂಭವಾಗಲಿದೆ. ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಮತ ಎಣಿಕೆ ಕಾರ್ಯ ನಡೆಯಲಿದೆ. ಒಂದು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ೧೪ ಟೇಬಲ್‌ಗಳಲ್ಲಿ ಮತ ಎಣಿಕೆ ನಡೆಯಲಿದೆ. ೨೦ ಸುತ್ತಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಅಂಚೆ ಮತ್ತು ಸೇವಾ ಮತದಾರರ ಪತ್ರ ಮತ ಎಣಿಕೆ ಕಾರ್ಯವೂ ನಡೆಯಲಿದೆ.
ಮತ ಎಣಿಕೆ ಹಿನ್ನೆಲೆಯಲ್ಲಿ ಸಂತ ಜೋಸೆಫರ ಶಾಲೆಯಲ್ಲಿ ಬ್ಯಾರಿಕೇಡ್ ಅಳವಡಿಕೆ, ಮತ ಎಣಿಕೆ ಕೇಂದ್ರದಲ್ಲಿ ಜಾಲರಿ ನಿರ್ಮಾಣ, ಟೇಬಲ್‌ಗಳ ಅಳವಡಿಕೆ, ಸಿಸಿಟಿವಿ ಅಳವಡಿಕೆ, ಸೂಕ್ತ ಪೊಲೀಸ್ ಬಂದೋಬಸ್ತ್ ಸೇರಿದಂತೆ ಹಲವು ಕಾರ್ಯಗಳನ್ನು ಮಾಡಲಾಗಿದೆ.
ಮಡಿಕೇರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಕಾಂಗ್ರೆಸ್‌ನಿಂದ ಡಾ. ಮಂಥರ್ ಗೌಡ, ಜೆಡಿಎಸ್‌ನಿಂದ ನಾಪಂಡ ಮುತ್ತಪ್ಪ. ಎಸ್‌ಡಿಪಿಐನಿಂ ಅಮೀನ್ ಮೊಹಿಸಿನ್ ಸೇರಿದಂತೆ ೧೫ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ವಿರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ಕೆ.ಜಿ. ಬೋಪಯ್ಯ, ಕಾಂಗ್ರೆಸ್‌ನಿಂದ ಎ.ಎಸ್. ಪೊನ್ನಣ್ಣ, ಜೆಡಿಎಸ್‌ನಿಂದ ಎಂ.ಎ. ಮನ್ಸೂರ್ ಅಲಿ, ಸರ್ವೋದಯ ಕರ್ನಾಟಕ ಪಕ್ಷದಿಂದ ಕೆ.ಎಸ್. ಮನು ಸೇರಿ ೯ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.
ಎರಡೂ ಕ್ಷೇತ್ರಗಳಲ್ಲಿ ಮುಂದಿನ ಶಾಸಕರು ಯಾರಾಗುತ್ತಾರೆ ಎನ್ನುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಮಡಿಕೇರಿ ಕ್ಷೇತ್ರದಲ್ಲಿ ಆರಂಭದಲ್ಲಿ ತ್ರಿಕೋನ ಸ್ಪರ್ಧೆ ಕಂಡುಬಂದಿತ್ತಾದರೂ ಮತದಾನದ ಹಿಂದಿನ ದಿನ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಶಸ್ತ್ರತ್ಯಾಗ ಮಾಡಿದ್ದರಿಂದ ಈಗ ಬಿಜೆಪಿಯ ಅಪ್ಪಚ್ಚುರಂಜನ್ ಮತ್ತು ಕಾಂಗ್ರೆಸ್‌ನ ಮಂಥರ್ ಗೌಡ ಇಬ್ಬರ ಮಧ್ಯೆ ಪೈಪೋಟಿ ಇದೆ.
ವಿರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿಯ ಕೆ.ಜಿ. ಬೋಪಯ್ಯ ಮತ್ತು ಕಾಂಗ್ರೆಸ್‌ನ ಎ.ಎಸ್. ಪೊನ್ನಣ್ಣ ಮಧ್ಯೆ ಸ್ಪರ್ಧೆ ಕಂಡುಬರುತ್ತಿದೆ.
ನಿಷೇಧಾಜ್ಞೆ ಜಾರಿ
ಮಣ ಎಣಿಕೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸೆಕ್ಷನ್ ೧೪೪ ಜಾರಿ ಮಾಡಲಾಗಿದೆ. ಶುಕ್ರವಾರ ಮಧ್ಯರಾತ್ರಿ ೧೨ ಗಂಟೆಯಿಂದ ಶನಿವಾರ ಮಧ್ಯರಾತ್ರಿ ೧೨ ಗಂಟೆಯವರೆಗೆ ಸೆ.೧೪೪ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ್ ಆದೇಶ ಹೊರಡಿಸಿದ್ದಾರೆ. ಕೊಡಗು ಜಿಲ್ಲೆಯಾದ್ಯಂತ ಪಟಾಕಿ ಸಿಡಿಸುವುದು,ವಿಜಯೋತ್ಸವ, ಮೆರಣಿಗೆ ತೆರಳುವುದು, ರಾಜಕೀಯ ಸಭೆ, ಸಮಾರಂಭ, ವಾಹನ ಜಾಥಾ ಆಯೋಜನೆ, ಮುಂತಾದವುಗಳನ್ನು ನಿಷೇಧಿಸಲಾಗಿದೆ. ದಹನ ವಸ್ತು, ಮಾರಕ ಆಯುಧಗಳೊಂದಿಗೆ ಸಂಚರಿಸುವುದು ಕೂಡ ನಿರ್ಬಂಧಿಸಲಾಗಿದೆ. ಎತ ಎಣಿಕೆ ಕೇಂದ್ರವಾದ ಮಡಿಕೇರಿಯ ಸಂತಜೋಸೇಫರ ಕಾನ್ವೆಂಟ್ ಸುತ್ತಲಿನ ೨೦೦ ಮೀಟರ್ ಸಂಪೂರ್ಣ ನಿರ್ಬಂಧಿತ ಪ್ರದೇಶ ಎಂದು ಘೋಷಿಸಲಾಗಿದೆ. ಖಾಸಗಿ ವಾಹನಗಳ ತಂಗುವಿಕೆ, ಧ್ವನಿವರ್ಧಕ ಬಳಕೆಗೂ ನಿಷೇಧ ಹೇರಲಾಗಿದ್ದು, ಆದೇಶ ಮೀರಿ ಕಾನೂನು ಉಲ್ಲಂಘಿಸಿದರೆ ಕಾನೂನು ಕ್ರಮದ ಎಚ್ಚರಿಕೆಯನ್ನು ಜಿಲ್ಲಾಧಿಕಾರಿ ನೀಡಿದ್ದಾರೆ.