ಖೋಟಾ ನೋಟ್ ತಯಾರಿ, ನಾಲ್ವರ ಬಂಧನ

07 Jaggu 10_Web
ಖೋಟಾ ನೋಟ್‌ನ ಬಂಡಲ್‌ಗಳನ್ನು ತಯಾರಿಸಿ ಜನರಿಗೆ ಮೋಸ ಮಾಡಲು ಯೋಜಿಸಿದ್ದ ನಾಲ್ವರನ್ನು ಬೆಳಗಾವಿ ಜಿಲ್ಲೆ ಘಟಪ್ರಭಾ ಠಾಣೆಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
Published on

ಬೆಳಗಾವಿ: ಖೋಟಾ ನೋಟ್ ತಯಾರಿಸಿ ಜನರಿಗೆ ಮೋಸ ಮಾಡಲು ಯೋಜಿಸಿದ್ದ ಆರೋಪದ ಹಿನ್ನೆಲೆಯಲ್ಲಿ ನಾಲ್ವರನ್ನು ಜಿಲ್ಲೆಯ ಘಟಪ್ರಭಾ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಗೋಕಾಕ ತಾಲೂಕಿನ ಧೂಪದಾಳದ ರಫೀಕ್ ಉರ್ಫ್ ಮಹ್ಮದ್ ಇಸಾಕ್ ಅಬ್ದುಲ್ ರೆಹಮಾನ್ ದೇಸಾಯಿ (55), ರಾಯಬಾಗ ತಾಲೂಕಿನ ಸಿದ್ಧಾಪುರದ ಗುಂಡು ಸದಾಶಿವ ಪಾಟೀಲ (35), ಗೋಕಾಕದ ಆದಿ ಜಾಂಬವ ನಗರದ ಮಲ್ಲಿಕಾರ್ಜುನ ಕನ್ಮಡ್ಡಿ (32) ಮತ್ತು ಮುನಾಫ್ ರಪೀಕ್ ಉರ್ಫ್ ಮಹ್ಮದ್ ಇಸಾಕ್ ದೇಸಾಯಿ (21) ಬಂಧಿತರು. ಅವರಿಂದ ಪೇಪರ್ ಬಂಡಲ್‌ಗಳು, ತಲಾ 2 ಕಾರ್, ಬೈಕ್ ವಶಪಡಿಸಿಕೊಳ್ಳಲಾಗಿದೆ. ಬಂಧಿತರು ಎರಡೂ ಬದಿಯಲ್ಲಿ 500 ರೂ. ಮುಖಬೆಲೆಯ ಅಸಲಿ ನೋಟ್ ಹಾಕಿ ಒಳಗಡೆ ಕಾಗದದ ಬಂಡಲ್‌ಗಳನಿಟ್ಟು ಅಸಲಿ ನೋಟ್‌ಗಳ ಬಂಡಲ್ ಕಾಣುವಂತೆ ತಯಾರಿಸಿದ್ದರು. ಅಸಲಿ ನೋಟ್ ಪಡೆದು ತಮ್ಮ ಬಳಿಯಿರುವ ಬಂಡಲ್‌ಗಳನ್ನು ಯಾರಿಗೋ ಕೊಡಲು ಯೋಜಿಸಿದ್ದರು. ಮಹಮ್ಮದ್ ಇಸಾಕ್ ದೇಸಾಯಿ ಎಂಬಾತನ ಮನೆಯಲ್ಲಿ ಬಂಡಲ್ ತಯಾರಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ನಾಲ್ವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net