

ವಿಜಯಪುರ: ಮಕ್ಕಳ ಸಾಹಿತಿಗಳ ತವರು, ಶರಣ ಸಾಹಿತ್ಯದ ಪುಣ್ಯ ನೆಲ, ಜಾನಪದ ಸಾಹಿತ್ಯದ ಜನ್ಮ ಸ್ಥಳ, ದಾಸ ಸಾಹಿತ್ಯದ ಪಾವನ ಭೂಮಿಯಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅರ್ಥಪೂರ್ಣತೆ ಹೆಚ್ಚಿಸುವ ನಿಟ್ಟಿನಲ್ಲಿ ಸಹಾಯ ಮತ್ತು ಸಹಕಾರ ನೀಡಬೇಕೆಂದು ಪರಿಷತ್ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಕೋರಿದರು.
ಅನೇಕ ಸಾಹಿತಿಗಳು, ಸಂಶೋಧಕರು, ಚಿಂತಕರು ಇರುವ ವಿಜಯಪುರ ಜಿಲ್ಲೆಯ ಉದಯೋನ್ಮುಖ ಸಾಹಿತಿಗಳನ್ನು, ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸಿ ನಾಡಿಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಸಮ್ಮೇಳನ ಆಯೋಜಿಸಲಾಗಿದೆ. ಹೀಗಾಗಿ ಕನ್ನಡಪರ ಸಂಘಟನೆಗಳು, ವಿವಿಧ ಸಂಘ-ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಸಮಾಜದ ಎಲ್ಲ ಪ್ರಮುಖ ವ್ಯಕ್ತಿಗಳು ಕನ್ನಡಾಂಬೆಯ ಸೇವೆಗೆ ಕೈಜೋಡಿಸಬೇಕೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮನವಿ ಮಾಡಿದರು.
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಫೆ. 24 ರಿಂದ ಎರಡು ದಿನಗಳ ಕಾಲ ನಡೆಯಲಿರುವ ಸಮ್ಮೇಳನಕ್ಕೆ ಈಗಾಗಲೇ ಸಕಲ ಸಿದ್ಧತೆ ಪೂರ್ಣಗೊಳಿಸಲಾಗಿದೆ. ಆಧ್ಯಾತ್ಮ, ಸಾರಸ್ವತ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಇಂಗಳೇಶ್ವರ ವಚನ ಶಿಲಾಮಂಟಪದ ಚೆನ್ನಬಸವ ಮಹಾಸ್ವಾಮೀಜಿ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಪ್ರಧಾನ ವೇದಿಕೆಗೆ ಶತಮಾನ ಕಂಡ ಸಂತ ಶ್ರೀ ಸಿದ್ಧೇಶ್ವರ ಶ್ರೀಗಳ ಹೆಸರಿಡಲಾಗಿದೆ. ಮುಖ್ಯದ್ವಾರಕ್ಕೆ ವಚನ ಪಿತಾಮಹ ಡಾ.ಫ.ಗು. ಹಳ್ಳಿಕಟ್ಟಿ ಅವರ ಹೆಸರಿಡಲಾಗಿದೆ. ಪುಸ್ತಕ ಮಳಿಗೆಗೆ ಜಾನಪದ ಭೀಷ್ಮ ಡಾ.ಸಿಂಪಿ ಲಿಂಗಣ್ಣ ಹಾಗೂ ದಾಸೋಹ ಮನೆಗೆ ಕನ್ನಡ ಪ್ರೇಮಿ ಡಾ.ಜಯದೇವಿತಾಯಿ ಲಿಗಾಡೆ ಹೆಸರಿಡಲಾಗಿದೆ ಎಂದರು.
ಬಂಡಾಯ ಸಾಹಿತ್ಯ, ದಾಸ ಸಾಹಿತ್ಯ, ಮಹಿಳಾ ಸಾಹಿತ್ಯ ಹೀಗೆ ನಾನಾ ಪ್ರಕಾರದ ಸಾಹಿತ್ಯ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಕವಿಗೋಷ್ಠಿ, ಮನರಂಜನೆ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗುತ್ತಿದೆ. ಸಾಧಕ ದಂಪತಿಗೆ ಸನ್ಮಾನ, ಪ್ರಾಚಾರ್ಯರಿಗೆ, ಮಹಾನಗರ ಪಾಲಿಕೆ ಸದಸ್ಯರಿಗೆ, ಸಹಕಾರಿ ಬ್ಯಾಂಕ್‌ನ ಪದಾಧಿಕಾರಿಗಳಿಗೆ, ವಿವಿಧ ವಸತಿ ಶಾಲೆಗಳ ಪ್ರಾಚಾರ್ಯರಿಗೆ, ಶಿಕ್ಷಕರ ಸಂಘದ ಪ್ರಮುಖರು ಹಾಗೂ ವಿವಿಧ ಕ್ಷೇತ್ರಗಳಲ್ಲಿರುವ ಸಾಧಕರಿಗೆ ಸನ್ಮಾನ ಇರಿಸಿಕೊಳ್ಳಲಾಗಿದೆ. ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ಭವ್ಯವಾಗಿ ನೆರವೇರಲಿದೆ ಎಂದರು.
ವಿಜಯಪುರ ಸಂಸ್ಕೃತಿ ಪ್ರತಿಬಿಂಬಿಸುವ ಸಜ್ಜೆ ರೊಟ್ಟಿ, ಶೇಂಗಾ ಹಿಂಡಿ ಮೊದಲಾದ ಪದಾರ್ಥಗಳುಳ್ಳ ಪ್ರಸಾದ ವ್ಯವಸ್ಥೆಯನ್ನು ಸಾಹಿತ್ಯಪ್ರಿಯರಿಗಾಗಿ ಸಜ್ಜುಗೊಳಿಸಲಾಗಿದೆ. ಸಮ್ಮೇಳನಕ್ಕೆ ಸರ್ಕಾರದಿಂದ ಐದು ಲಕ್ಷ ರುಪಾಯಿ ಸಹಾಯಧನ ಬರಬೇಕಿದೆ. ಆದರೆ, ಕಳೆದ 19ನೇ ಸಮ್ಮೇಳನದ ಅನುದಾನವೇ ಬಂದಿಲ್ಲ. ಹೀಗಾಗಿ ಈ ಬಾರಿ ಅನುದಾನದ ನಿರೀಕ್ಷೆಯಲ್ಲಿದ್ದೇವೆ. ಅಲ್ಲದೇ, ಕನ್ನಡದ ಮನಸ್ಸುಗಳು ಸಹಾಯ ಮಾಡಲು ಮುಂದೆ ಬರಬೇಕಿದ್ದು, ಈಗಾಗಲೇ ಕೆಲವರು ದೊಡ್ಡ ಮನಸ್ಸು ಮಾಡಿ ಸಹಕಾರ ನೀಡುತ್ತಿದ್ದಾರೆಂದು ವಾಲೀಕಾರ ತಿಳಿಸಿದರು.
ಪ್ರಮುಖರಾದ ಭಾರತಿ ಪಾಟೀಲ, ಜಯಶ್ರೀ ಹಿರೇಮಠ, ಸುರೇಶ ಜತ್ತಿ, ಡಾ.ಸಂಗಮೇಶ ಮೇತ್ರಿ, ಡಾ.ಮಾಧವ ಕುಲಕರ್ಣಿ, ಎಸ್.ಎಲ್. ಇಂಗೇಶ್ವರ, ಅಭಿಷೇಕ ಚಕ್ರವರ್ತಿ, ಅಹ್ಮದ್ ವಾಲೀಕಾರ, ಸಾಬು ನರಳೆ ಇತರರಿದ್ದರು.