

ಮಂಡ್ಯ: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮತದಾನ ಪ್ರಕ್ರಿಯೆಗೆ ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಟು ವಿಧಾನಸಭಾ ಕ್ಷೇತ್ರದಿಂದ 2,076 ಮತಗಟ್ಟೆ ತೆರೆಯಲಾಗಿದೆ. ಅಂತೆಯೇ 8,76,112 ಪುರುಷ ಹಾಗೂ 9,02,963 ಮಹಿಳೆಯರು ಮತ್ತು 168 ಇತರೆ ಸೇರಿದಂತೆ 17,79,243 ಮತದಾರರಿದ್ದಾರೆ. ಇನ್ನು 693 ಕ್ರಿಟಿಯಲ್, 33 ವಲ್ನರಬಲ್, 40 ಪಿಂಕ್, 8 ಅಂಗವಿಕಲ, 16 ಎತ್ನಿಕ್ ಹಾಗೂ 16 ಯುವ ನೌಕರರ ಮತಗಟ್ಟೆ ತೆರೆಯಲಾಗಿದೆ. ಇದಲ್ಲದೆ ಕ್ಷೇತ್ರದಲ್ಲಿ 1,120 ಮತಗಟ್ಟೆಯಲ್ಲಿ ವೆಬ್‌ಕಾಸ್ಟಿಂಗ್ ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.
ಚುನಾವಣೆಗೆ ಸಂಬಂಧಿಸಿದಂತೆ 24ರಂದು ಸಂಜೆ 6ಗಂಟೆಗೆ ಬಹಿರಂಗ ಪ್ರಚಾರ ಮುಗಿಯಲಿದೆ. ಈ ಅವಧಿಯೊಳಗೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರಲ್ಲದ ರಾಜಕೀಯ ಮುಖಂಡರು, ಕಾರ್ಯಕರ್ತರು, ಸ್ಟಾರ್ ಪ್ರಚಾರಕರು, ಮೆರವಣಿಗೆ ಆಯೋಜಕರು ಕ್ಷೇತ್ರ ಬಿಡಬೇಕೆಂದು ಸೂಚನೆ ನೀಡಲಾಗಿದೆ. ಮತದಾನದ ಕೊನೆ 48 ಗಂಟೆ ಅವಧಿಗೆ ಒಬ್ಬ ಅಭ್ಯರ್ಥಿಗೆ ಮೂರು ವಾಹನ ಮಾತ್ರ ಬಳಕೆಗೆ ಅವಕಾಶವಿರಲಿದೆ. ಅಂತೆಯೇ ಅಭ್ಯರ್ಥಿಯ ಅನುಪಸ್ಥಿತಿಯಲ್ಲಿ ವಾಹನವನ್ನು ಇತರರು ಉಪಯೋಗಿಸುವಂತಿಲ್ಲ. ಮತದಾನದ ದಿನ ಮತಗಟ್ಟೆಯ 100 ಮೀ ಅಂತರದೊಳಗೆ ಮೊಬೈಲ್ ಬಳಕೆ ಹಾಗೂ ಪ್ರಚಾರವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಅಂಎಯೇ 200 ಮಿ ವ್ಯಾಪ್ತಿಯಲ್ಲಿ ರಾಜಕೀಯ ಪಕ್ಷಗಳ ಟೆಂಟ್ ತೆರೆಯುವಂತಿಲ್ಲ. 200 ಮೀ ವ್ಯಾಪ್ತಿ ಹೊರಗೆ ಟೆಂಟ್ ತೆರೆಯಲು ಅನುಮತಿ ಪಡೆದುಕೊಳ್ಳಬೇಕು ಎಂದು ವಿವರಿಸಿದರು.
ಇನ್ನು ಅಂಗವಿಕಲರು ಹಾಗೂ ಹಿರಿಯ ನಾಗಕರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಕೆಲ ವ್ಯವಸ್ಥೆ ಮಾಡಲಾಗಿದೆ. ಅದರಂತೆ ಮತಗಟ್ಟೆಯಲ್ಲಿ ಇಳಿಜಾರು ಹಾಗೂ ವೀಲ್ಹ್‌ಚೇರ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದರೊಟ್ಟಿಗೆ ದೃಷ್ಟಿದೋಷವುಳ್ಳವರಿಗೆ ಬ್ರೈಲ್ ಲಿಪಿಯುಳ್ಳ ವಿದ್ಯುನ್ಮಾನ ಮತಯಂತ್ರ ಹಾಗೂ ಡಮ್ಮಿ ಬ್ರೈಲ್ ಬ್ಯಾಲೇಟ್ ಪೇಪರ್ ವ್ಯವಸ್ಥೆ ಇರಲಿದೆ. ಶ್ರವಣದೋಷವುಳ್ಳವರಿಗೆ ಸಂಜ್ಞಾ ಭಾಷೆ ತಜ್ಞರಿಂದ ಅವಶ್ಯಕ ವ್ಯವಸ್ಥೆ ಮಾಡಿಕೊಡಲಾಗುವುದು. ಮಂದದೃಷ್ಟಿಯುಳ್ಳವರಿಗೆ ಬೂತಗನ್ನಡಿ ವ್ಯವಸ್ಥೆ ಇರಲಿದ್ದು, ಹಿರಿಯ ನಾಗರಿಕರು ಹಾಗೂ ಅಂಗವಿಕಲರು ಸರತಿ ಸಾಲಿನಲ್ಲಿ ನಿಲ್ಲದೇ ನೇರವಾಗಿ ಮತದಾನ ಮಾಡಬಹುದು. ಮನೆಯಿಂದ ಮತದಾನ ಮಾಡಲು ಅನುಮತಿ ಪಡೆದಿದ್ದವರ ಪೈಕಿ 2,439 ಜನ 85 ವರ್ಷ ಮೇಲ್ಪಟ್ಟವರು ಹಾಗೂ 871 ಜನ ಅಂಗವಿಕಲರು ಮತ ಚಲಾಯಿಸಿದ್ದಾರೆ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇದ್ದರು.
1,06 ಕೋಟಿ ರೂ ನಗದು ವಶ
ಚುನಾವಣೆ ನೀತಿ ಸಂಹಿತ ಅವಧಿಯಲ್ಲಿ ಅಂದರೆ ಮಾ.16ರಿಂದ ಏ.23ರವರೆಗೆ ಜಿಲ್ಲೆಯಲ್ಲಿ 1,06,08,990 ರೂಗಳನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ 99 ಲಕ್ಷ ರೂಗಳನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ. ಉಳಿದ ಹಣಕ್ಕೆ ಸಂಬಂಧಿಸಿದಂತೆ ಜಿಪಂ ಸಿಇಒ ನೇತೃತ್ವದಲ್ಲಿ ಇತ್ಯರ್ಥ ಮಾಡಲಾಗುತ್ತದೆ. ಅಂತೆಯೇ 1,50,27,871 ರೂ ಮೌಲ್ಯದ 52,861 ಲೀಟರ್ ಮದ್ಯ, 2,17,040 ರೂ ಮೌಲ್ಯದ ಡ್ರಗ್ಸ್, 40 ಸಾವಿರ ರೂ ಮೌಲ್ಯದ 2 ಸಾವಿರ ಸೀರೆ ದಸ್ತಗಿರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ವಿವರಿಸಿದರು.
ಇನ್ನು ಚುನಾವಣೆ ಸಂಬಂಧಿತ 65 ದೂರು ದಾಖಲಾಗಿದ್ದು, ಇದರಲ್ಲಿ 54 ಅನ್ನು ವಿಲೇವಾರಿ ಮಾಡಲಾಗಿದೆ. ಚುನಾವಣೆ ಕೆಲಸಕ್ಕೆಂದು ಬಳಸುತ್ತಿರುವ 204 ವಾಹನಕ್ಕೆ ಜಿಪಿಎಸ್ ಅಳವಡಿಸಲಾಗಿದೆ. ಶಾಂತಿಯುತ ಚುನಾವಣೆ ನಡೆಸುವ ಉದ್ದೇಶದಿಂದ ಕ್ಷೇತ್ರದಲ್ಲಿ 1 ಸಿಆರ್‌ಪಿಎಫ್, 3 ಎಸ್‌ಎಪಿ ಕಂಪನಿ ಸೇರಿದಂತೆ 288 ಜನರನ್ನು ಭದ್ರತೆಗೆಂದು ನಿಯೋಜಿಸಲಾಗಿದೆ ಎಂದರು.
ಮತ ಚಲಾಯಿಸಿ ಪ್ರವಾಸ ಮಾಡಿ
ಮತದಾನದ ದಿನದಂದು ಜಿಲ್ಲೆಯ ಪ್ರವಾಸಿತಾಣಕ್ಕೆ ನಿಷೇಧ ವಿಧಿಸಿಲ್ಲ. ಆದರೆ ಪ್ರವಾಸಕ್ಕೆ ಬರುವ ಮುನ್ನ ಎಲ್ಲರೂ ಮತದಾನ ಮಾಡಿ ಎಂದು ಡಿಸಿ ಡಾ.ಕುಮಾರ ಮನವಿ ಮಾಡಿದರು.
ಹೊಸ ಮತದಾರರಿಗೆ ಸಂಬಂಧಿಸಿದಂತೆ ಕ್ಷೇತ್ರದಲ್ಲಿ 18,201 ಜನರಿಗೆ ಗುರುತಿನ ಚೀಟಿ ನೀಡಲಾಗಿದೆ. 17,79,243 ಜನರಿಗೆ ಮತದಾನದ ಚೀಟಿ, 4,23,486 ಜನರಿಗೆ ಮತದಾನದ ಮಾಹಿತಿ, 42,340 ಯುವ ಮತದಾರರಿಗೆ ಮಾಹಿತಿ ಪುಸ್ತಕ, 2 ಲಕ್ಷ ಜನರಿಗೆ ಪ್ರಜಾಪ್ರಭುತ್ವದ ಮತದಾನದ ಹಬಕ್ಕೆ ಆಮಂತ್ರಣ ಎಂಬ ಆಹ್ವಾನ ಪತ್ರಿ ಮುದ್ರಿಸಿ ನೀಡಲಾಗಿದೆ. ಇನ್ನು ಕ್ಷೇತ್ರದಲ್ಲಿ 906 ಜನ ಸೇವಾ ಮತದಾರರಿದ್ದು, ಈವರೆಗೆ 128 ಜನರು ಮತ ಚಲಾಯಿಸಿದ್ದಾರೆ. ಇನ್ನೂ ಕಾಲಾವಕಾಶವಿರುವುದರಿಂದ ಉಳಿದವರು ಮತದಾನ ಮಾಡಲಿದ್ದಾರೆ. ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ 25ರಂದು ರಾತ್ರಿ ಹಾಗೂ 26ರಂದು ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಊಟೋಪಚಾರದ ವ್ಯವಸ್ಥೆಯನ್ನು ತಾಪಂ ಇಒ ಜತೆಗೆ ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕರು ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು.
ಒಣ ದಿನ ಘೋಷಣೆ, ಸಂತೆ ನಿಷೇಧ
ಚುನಾವಣೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಏ.24ರ ಸಂಜೆ 6ಗಂಟೆಯಿಂದ 27ರ ಬೆಳಗ್ಗೆ 6ರವರೆಗೆ ಜಿಲ್ಲಾದ್ಯಂತ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಅಂತೆಯೇ ಮತ ಎಣಿಕೆಗೆ ಸಂಬಂಧಿಸಿದಂತೆ ಜೂ.3ರಂದು ಸಂಜೆ 6ಗಂಟೆಯಿಂದ 5ರ ಬೆಳಗ್ಗೆ 6ಗಂಟೆವರೆಗೆ ಮಂಡ್ಯ ನಗರ ಹಾಗೂ 5 ಕಿ.ಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಡಿಸಿ ಡಾ.ಕುಮಾರ ತಿಳಿಸಿದರು.
ಇನ್ನು ಮತದಾನಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಏ.26ರಂದು ಜಿಲ್ಲಾದ್ಯಂತ ಸಂತೆ, ಜಾತ್ರೆ ಹಾಗೂ ಉತ್ಸವವನ್ನು ನಿಷೇಧಿಸಲಾಗಿದೆ. ಜತೆಗೆ ಮತ ಚಲಾಯಿಸುವ ಅನುಕೂಲವಾಗುವಂತೆ 26ರಂದು ವ್ಯವಹಾರಿಕ ಸಂಸ್ಥೆ, ಔಧ್ಯಮಿಕ ಹಾಗೂ ಇನ್ನಿತರೆ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ನೌಕರರಿಗೆ ವೇತನ ಸಹಿತ ರಜೆ ನೀಡಲಾಗಿದೆ. ಇದನ್ನು ಉಲ್ಲಂಘಿಸಿದರೆ ಸಂಸ್ಥೆಯ ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.