

ಗೊಳಸಂಗಿ: ಸ್ಥಳಿಯ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂದ ವಜ್ರ ಮಹೋತ್ಸವ ಮತ್ತು ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ (ವಿಡಿಸಿಸಿ) ಬ್ಯಾಂಕಿನ 48 ನೇ ಶಾಖೆ ಉದ್ಘಾಟನಾ ಸಮಾರಂಭ ಸೋಮವಾರ ಜರುಗಲಿದ್ದು, ಇಡಿ ಊರಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ.
ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಿಸಲು ಗ್ರಾಮದ ಶ್ರೀ ರಾ.ಅ.ದಳವಾಯಿ ಪ್ರೌಢಶಾಲಾ ಆವರಣದಲ್ಲಿ 3050 ಅಡಿ ಸುತ್ತಳತೆಯ ಸಭಾಮಂಟಪ, 80200 ಅಡಿ ಸುತ್ತಳತೆಯ ವೇದಿಕೆ ನಿರ್ಮಿಸಲಾಗಿದೆ. ಇದರಲ್ಲಿ 3 ಸಾವಿರ ಜನರಿಗಾಗಿ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಸಮಾರಂಭದ ವೇಳೆ ಆಕಸ್ಮಿಕವಾಗಿ ಮಳೆ ಸುರಿದರೆ ಅದರಿಂದ ಪಾರಾಗಲು ವೇದಿಕೆಯ ಮೇಲ್ಭಾಗದಲ್ಲಿ ತಗಡಿನ ಸೀಟ್ ಹಾಕಲಾಗಿದೆ.
ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ವಿಐಪಿಗಳಿಗಾಗಿ 2060 ಅಡಿ, ಪಕ್ಕದ ಕ್ರೀಡಾಂಗಣದಲ್ಲಿ ಸಭಾಸದರ ಊಟಕ್ಕಾಗಿ 100100 ಅಡಿ ಅಳತೆಯ ವೇದಿಕೆ ನಿರ್ಮಿಸಲಾಗಿದೆ. ಸಮಾರಂಭಕ್ಕೆ ಆಗಮಿಸುವ ಅಂದಾಜು 5&6 ಸಾವಿರ ಜನತೆಗೆ ಚಪಾತಿ, ಎರಡು ಬಗೆಯ ಪಲ್ಲೆ, ಸುರಮಾ (ಉದರ ಸಜ್ಜಕ), ಮಿರ್ಚಿ ಭಜಿ, ಅನ್ನ&ಸಾಂಬಾರ ಊಟದ ವ್ಯವಸ್ಥೆ ಮಾಡಲಾಗಿದೆ. ವಜ್ರ ಮಹೋತ್ಸವದ ಸಂಭ್ರಮ ಎಲ್ಲೆಡೆ ಮನೆ ಮಾಡುವಂತೆ ಗ್ರಾಮದ ಪ್ರಮುಖ ಬೀದಿಗಳಲ್ಲೆಲ್ಲ ಶ್ರೀಗಳು, ಜನಪ್ರತಿನಿಧಿಗಳನ್ನು ಸ್ವಾಗತಿಸಲು ಕಟೌಟ್ಗಳು ಎಲ್ಲೆಡೆ ರಾರಾಜಿಸುತ್ತಿವೆ.