ಗಣಿನಾಡಿನಲ್ಲಿ ಅಕ್ಷರ ಜಾತ್ರೆಗೆ ದಿನಾಗಣನೆ

BLY-22-2 nisti rudrappa
Published on

ಬಳ್ಳಾರಿ : ಗಣಿನಾಡಿನಲ್ಲಿ 22ನೇ ಜಿಲ್ಲಾಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಮಾ.1 ಹಾಗೂ 2ರಂದು ಬಳ್ಳಾರಿ ನಗರದ ರಾಘವ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ.ನಿಷ್ಠಿ ರುದ್ರಪ್ಪ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನ ನಡೆಯಲಿರುವ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ಅರವಿಂದ ಪಟೇಲ್ ಆಯ್ಕೆ ಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಸಮ್ಮೇಳನದಲ್ಲಿ ಒಟ್ಟು ಎಂಟು ಗೋಷ್ಠಿಗಳು ನಡೆಯಲಿವೆ. ಕಾರ್ಯಕ್ರಮದಲ್ಲಿ ವಿವಿಧ ಸಾಧಕರನ್ನು ಸನ್ಮಾನಿಸಲಾಗುವುದು. ಎರಡು ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.
ಮಾ.1ರಂದು ಬೆಳಗ್ಗೆ 7.30ಕ್ಕೆ ಧ್ವಜಾರೋಹಣ, 8.30ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭಗೊಳ್ಳಲಿದೆ. ಶಾಸಕ ಜಿ.ಸೋಮಶೇಖರ ರೆಡ್ಡಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಕಮ್ಮ ಭವನದಿಂದ ಆರಂಭಗೊಂಡು ರಾಯಲ್ ವೃತ್ತ, ಮೀನಾಕ್ಷಿ ವೃತ್ತ, ಕಾಳಮ್ಮ ವೃತ್ತ, ಬ್ರೂಸ್‌ಪೇಟೆ ವೃತ್ತ, ತೇರು ಬೀದಿ, ರೈಲು ನಿಲ್ದಾಣದ ಮಾರ್ಗವಾಗಿ ಮತ್ತೆ ರಾಯಲ್ ವೃತ್ತಕ್ಕೆ ತಲುಪಿ ಅಲ್ಲಿಂದ ರಾಘವ ಕಲಾಮಂದಿರದ ಬಳಿ ಮುಕ್ತಾಯಗೊಳ್ಳಲಿದೆ ಎಂದರು.

ಬೆಳಗ್ಗೆ 1.30ಕ್ಕೆ ಸಮ್ಮೇಳನದ ಉದ್ಘಾಟನಾ ಸಮಾರಂಭ ಜರುಗಲಿದೆ. ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಕೊಟ್ಟೂರು ಬಸವಲಿಂಗ ಸ್ವಾಮೀಜಿ , ಫಾದರ್ ಐವಾನ್ ಪಿಂಟೋ ಅಧ್ಯಕ್ಷತೆವಹಿಸಲಿದ್ದಾರೆ. ಕಸಾಪ ಅಧ್ಯಕ್ಷ ಡಾ.ಮಹೇಶ ಜೋಷಿ ಉದ್ಘಾಟಿಸಲಿದ್ದಾರೆ. ಸಚಿವ ಆನಂದ್‌ಸಿಂಗ್, ಶಾಸಕರು, ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ವಿವಿಧ ವಿಷಯಗಳ ಮೇಲೆ ಗೋಷ್ಠಿ
ಬಳ್ಳಾರಿ ಜಿಲ್ಲೆಯ ಸಾಹಿತ್ಯ-ಸಾಂಸ್ಕೃತಿಕ ವೈಶಿಷ್ಟೃಗಳು, ಕನ್ನಡ ಸಾಹಿತ್ಯ ಪ್ರಕಾರಗಳು, ಅಖಂಡ ಬಳ್ಳಾರಿ ಜಿಲ್ಲೆಯ ಜ್ವಲಂತ ಸಮಸ್ಯೆಗಳು, ಮಾಧ್ಯಮ ಮತ್ತು ಕನ್ನಡ, ಕನ್ನಡ ಸಾಹಿತ್ಯ ಪರಂಪರೆ ವಿಷಯಗಳ ಮೇಲೆ ವಿಚಾರಗೋಷ್ಠಿಗಳು ನಡೆಯಲಿದೆ. ಅಲ್ಲದೆ ಎರಡು ಕವಿಗೋಷ್ಠಿಗಳನ್ನು ಆಯೋಜಿಸಲಾಗಿದೆ ಎಂದರು.

ಮಾ.2ರಂದು ಸಮಾರೋಪ
ಮಾ.2ರಂದು ಸಂಜೆ 5ಗಂಟೆಗೆ ಸಮ್ಮೇಳನದ ಸಮಾರೋಪ ಸಮಾರಂಭ ನಡೆಯಲಿದೆ. ಸಂಡೂರಿನ ಪ್ರಭುಸ್ವಾಮೀಜಿ, ಬಳ್ಳಾರಿಯ ಕಲ್ಯಾಣ ಸ್ವಾಮೀಜಿ, ಖಾಜಿ ಮೊಹಮಿದ್ ಸಿದ್ಧಿಕಿ ಸಾನ್ನಿಧ್ಯವಹಿಸಲಿದ್ದು, ಡಾ.ಅರವಿಂದ ಪಟೇಲ್ ಸಮ್ಮೇಳನದ ಅಧ್ಯಕ್ಷರ ನುಡಿಯನ್ನಾಡಲಿದ್ದಾರೆ. ಎರಡು ದಿನ ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜತೆಗೆ ಎಂ.ಡಿ.ಮುಜಾವರ್ ರಚಿಸಿದ ನೇಗಿಲ ಯೋಗಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.

ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿಡಾ.ಕೆ.ಶಿವಲಿಂಗಪ್ಪ ಹಂದಿಹಾಳು, ಖಜಾಂಚಿ ಡಾ.ಬಸವರಾಜ ಗದಗಿನ, ಡಾ.ಮಧುಸೂಧನ ಕಾರಿಗನೂರು, ಯು.ಶಿವಾನಂದ, ಕೆ.ವಿ.ನಾಗರೆಡ್ಡಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net