

ಚಾಮರಾಜನಗರ: ಜಿಲ್ಲೆಯಲ್ಲಿರುವ ವಿವಿಧ ವಸತಿ ಶಾಲೆಗಳಿಗೆ 2023-24ನೇ ಸಾಲಿನಲ್ಲಿ ಖಾಲಿ ಇರುವ 297 ಸೀಟ್‌ಗಳ ಭರ್ತಿಗಾಗಿ ವಿದ್ಯಾರ್ಥಿಗಳ ಕೌನ್ಸೆಲಿಂಗ್ ನಡೆಯಿತು.
ನಗರದ ಕರಿನಂಜನಪುರ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ನಡೆದ ವಸತಿ ಶಾಲೆಗಳ ಪ್ರವೇಶಾತಿ ಕೌನ್ಸೆಲಿಂಗ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ್ ಭಾಗವಹಿಸಿ ಮಾತನಾಡಿ, 2023-24 ನೇ ಸಾಲಿನಲ್ಲಿ ಜಿಲ್ಲೆಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ, ಮುರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ 7,8 ಮತ್ತು 9 ನೇ ತರಗತಿಯಲ್ಲಿ ಖಾಲಿ ಇರುವ ಸೀಟುಗಳನ್ನು ಭರ್ತಿ ಮಾಡಲು ಪರೀಕ್ಷೆ ನಡೆಸಲಾಗಿದ್ದು, ಮೆರಿಟ್ ಆಧಾರದಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಕೌನ್ಸೆಲಿಂಗ್ ಮೂಲಕ ಸೀಟ್ ಹಂಚಿಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಕೌನ್ಸೆಲಿಂಗ್‌ನಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಇಂತಹ ಶಾಲೆಯೇ ಬೇಕು ಎಂದು ಹಠ ಹಿಡಿಯಬೇಡಿ. ಸೀಟ್ ಲಭ್ಯವಿದ್ದರೆ ಸಿಗುತ್ತದೆ, ಇಲ್ಲವೇ ಖಾಲಿ ಇರುವ ಬೇರೆ ಶಾಲೆಯಲ್ಲಿ ಲಭ್ಯವಾಗುತ್ತದೆ. ಆಗಾಗಿ ಇಂತಹ ಶಾಲೆಯೇ ಬೇಕು ಎಂಬುದನ್ನು ಬಿಟ್ಟು ಮೊದಲು ವಿದ್ಯಾರ್ಥಿಗಳು ವಸತಿ ಶಾಲೆಗೆ ದಾಖಲಾಗುವುದರ ಬಗ್ಗೆ ಚಿಂತಿಸಿ. ಕೆಲವು ಪಾಲಕರಿಗೆ ಈ ವಸತಿ ಶಾಲೆಯಲ್ಲಿ ಶಿಕ್ಷಣ ಚೆನ್ನಾಗಿದೆ, ಮತ್ತೊಂದರಲ್ಲಿ ಚೆನ್ನಾಗಿಲ್ಲ ಎಂಬ ಭಾವನೆ ಇರುತ್ತದೆ. ಅದೆಲ್ಲವೂ ಸುಳ್ಳು, ನಮ್ಮ ವಸತಿ ಶಾಲೆಗಳೆಲ್ಲವೂ ಒಂದೇ ಆಗಿದೆ. ಎಲ್ಲ ಶಾಲೆಗಳಲ್ಲೂ ಒಂದೇ ತರಹದ ಪಾಠ, ಪ್ರವಚನ ಮತ್ತು ಪುಸ್ತಕಗಳು ಹಾಗೂ ಉತ್ತಮ ಶಿಕ್ಷಣ ದೊರೆಯುತ್ತದೆ ಎಂದರು.
ಕಳೆದ ಸಾಲಿನಲ್ಲಿ 40 ವಿದ್ಯಾರ್ಥಿಗಳಲ್ಲಿ 78 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಖಾಸಗಿ ಶಾಲೆಗಳಲ್ಲೂ ಇಂತಹ ಶಿಕ್ಷಣ ಲಭ್ಯವಾಗುವುದಿಲ್ಲ. ನಿರಂತರವಾಗಿ ವಸತಿ ಶಾಲೆಗಳು ಉತ್ತಮ ಫಲಿತಾಂಶ ನೀಡುತ್ತಾ ಬಂದಿದೆ. ಆದ್ದರಿಂದ ಇಲಾಖೆ ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದವರನ್ನು ಮೊದಲು ಪರಿಗಣಿಸಲಾಗುವುದು. ಯಾರಿಗೆ ಇಲಾಖೆಯಿಂದ ಕರೆ ಬಂದಿದೆಯೋ ಅವರೆಲ್ಲರಿಗೂ ಸೀಟ್ ದೊರೆಯುತ್ತದೆ. ಎಲ್ಲ ಪಾಲಕರು ಮತ್ತು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಡಿಸಿಒ ಮಹದೇವ್‌ಪ್ರಸಾದ್, ಪ್ರಾಂಶುಪಾಲರಾದ ಗುರುಪ್ರಸಾದ್, ಗಿರೀಶ್, ಶೂಹೈಬ್ ಪಾಷಾ, ಸವಿತಾ, ಲೋಕೇಶ್, ಬಸವಣ್ಣ ಹಾಗೂ ಇತರರು ಉಪಸ್ಥಿತರಿದ್ದರು.
ಮನವಿ ಮಾಡುತ್ತಿದ್ದ ಪಾಲಕರು
ಜಿಲ್ಲೆಯ ವಿವಿಧ ವಸತಿ ಶಾಲೆಗಳಲ್ಲಿ ಖಾಲಿ ಇರುವ 297 ಸೀಟ್‌ಗೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳ ಜತೆಗೆ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಇಲಾಖೆಯ ಪ್ರವೇಶ ಪರೀಕ್ಷೆ ಬರೆದು ಹೆಚ್ಚಿನ ಅಂಕ ಪಡೆದುಕೊಂಡಿದ್ದವರಿಗೆ ಹಾಗೂ ವಿಶೇಷ ಮೀಸಲಾತಿ ಸೌಲಭ್ಯ ಹೊಂದಿರುವ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗಿತ್ತು. ಕೆಲವು ವಿದ್ಯಾರ್ಥಿಗಳಿಗೆ ತಮ್ಮ ಇಷ್ಟದ ಶಾಲೆ ಸಿಕ್ಕರೆ, ಮತ್ತೆ ಕೆಲವು ವಿದ್ಯಾರ್ಥಿಗಳಿಗೆ ನಿರಾಶೆಯಾಗಿ ಪಾಲಕರು ಮನವಿ ಮಾಡುತ್ತಿದ್ದ ದೃಶ್ಯಗಳು ಕಂಡುಬಂದವು.