ಹತ್ತಿ, ತೊಗರಿಗೆ ಕಂಟಕವಾದ ಮಳೆ

Rain Effect Cotton Crop Damage
ಸಿರವಾರ ತಾಲೂಕಿನ ಲಕ್ಕಂದಿನ್ನಿ ಸೀಮೆಯಲ್ಲಿ ಮಳೆಯ ತೇವಾಂಶದಿಂದ ಹತ್ತಿ ಬೆಳೆ ಹಾನಿಗೀಡಾಗಿರುವುದು.
Published on

ಸಿರವಾರ: 15 ದಿನಗಳಿಂದ ಮಳೆ ಸುರಿಯುತ್ತಿದ್ದು, ಹತ್ತಿ, ತೊಗರಿ ಬೆಳೆ ಹಾನಿಗೀಡಾಗಿ, ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಮುಂಗಾರು ಹಂಗಾಮಿನಲ್ಲಿ ಬಿತ್ತಿರುವ ಹತ್ತಿ, ತೊಗರಿ, ಮೆಣಸಿನಕಾಯಿ ಬೆಳೆಗಳು ಈಗ ಹೆಚ್ಚಿನ ತೇವಾಂಶದಿಂದ ಹಾನಿಗೊಳಗಾಗುತ್ತಿವೆ. ಇದು ಒಂದೆಡೆ ರೈತರ ಖುಷಿ ಕಸಿದುಕೊಂಡಿದ್ದು, ಇನ್ನೊಂದೆಡೆ ಆತಂಕ ಮೂಡಿಸಿದೆ. ಈಗಿನ ಬೆಳೆ ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದರ ಜತೆ, ಮುಂದೆ ಏನು ಬಿತ್ತಬೇಕು ಎಂಬ ಸಮಸ್ಯೆಯೂ ತಲೆದೋರಿದೆ.

ತಾಲೂಕಿನ 799 ಹೆಕ್ಟೇರ್‌ನಲ್ಲಿ ತೊಗರಿ, 2222 ಹೆಕ್ಟೇರ್‌ನಲ್ಲಿ ಹತ್ತಿಯನ್ನು ಮುಂಗಾರು ಬೆಳೆಯಾಗಿ ಬಿತ್ತಲಾಗಿದೆ. ಈಗ ಹಳ್ಳದ ಪಕ್ಕದ ಹೊಲಗಳ ಬೆಳೆ ನಷ್ಟವಾಗಿದ್ದು, ಉಳಿದ ಪ್ರದೇಶದ ಬೆಳೆಗಳಿಗೆ ಅಧಿಕ ತೇವಾಂಶದ ಸಮಸ್ಯೆ ಎದುರಾಗಿದೆ. ಇದೇ ರೀತಿ ಮಳೆ ಮುಂದುವರಿದರೆ ಸಂಪೂರ್ಣ ಬೆಳೆ ನಾಶವಾಗುವ ಅಪಾಯವಿದೆ. ಹಾನಿಯಾದ ಬೆಳೆಯ ಸರ್ವೇ ಮಾಡಿಸಿ, ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂಬುದು ನೊಂದ ರೈತರ ಒತ್ತಾಯವಾಗಿದೆ.

ಸಿರವಾರ ತಾಲೂಕಿನಲ್ಲಿ ಮಳೆಯಿಂದ ಎಷ್ಟು ಬೆಳೆ ಹಾನಿಯಾಗಿದೆ ಎಂದು ಮಾಹಿತಿ ಇಲ್ಲ. ತೇವಾಂಶದಿಂದ ನಷ್ಟಕ್ಕೀಡಾದ ಬೆಳೆಗಳಿಗೆ ಕೆಲ ಔಷಧಿ ಸಿಂಪಡಿಸಿದರೆ ಸರಿಹೋಗುತ್ತವೆ.| ಫವಿದಾ ಬೇಗಂ ಕೃಷಿ ಅಧಿಕಾರಿಗಳು ಸಿರವಾರ ರೈತ ಸಂಪರ್ಕ ಕೇಂದ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net