ಬಿಳಿ ಬಂಗಾರದ ಬೆಲೆ ಇಳಿಕೆ,  ಖರೀದಿ ಕೇಂದ್ರ ಆರಂಭಕ್ಕೆ ಹೆಚ್ಚಿದ ಒತ್ತಡ

Published on

ಹುಬ್ಬಳ್ಳಿ: ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯೂ ಆಗಿರುವ ಬಿಳಿ ಬಂಗಾರದ (ಹತ್ತಿ) ದರವು ಮುಕ್ತ ಮಾರುಕಟ್ಟೆಯಲ್ಲಿ ಬಹಳಷ್ಟು ಕಡಿಮೆಯಾಗಿದ್ದು, ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡಿ ಸರ್ಕಾರ ಬೆಳೆಗಾರರ ರಕ್ಷಣೆಗೆ ಧಾವಿಸಬೇಕಿದೆ.

ಅತೀವೃಷ್ಟಿಯ ಮಧ್ಯೆಯೂ ಒಂದಿಷ್ಟು ಬೆಳೆ ಕೈಗೆ ಬಂದಿದ್ದು, ರೈತರು ಇದೀಗ ಹತ್ತಿ ಬಿಡಿಸಿಕೊಂಡು ಮಾರುಕಟ್ಟೆಗೆ ತಂದರೆ ಅಲ್ಲಿ ಉತ್ತಮ ಬೆಲೆ ಇಲ್ಲ. ಹಾಗಾಗಿ ಹತ್ತಿ ಬೆಳೆಯಲು ಮಾಡಿದ ಖರ್ಚು ಸಹ ವಾಪಸ್ ಬರುತ್ತಿಲ್ಲ ಎಂದು ಗೋಳಿಡುತ್ತಿದ್ದಾರೆ.

ಪ್ರತಿ ವರ್ಷ ಸೀಸನ್ ನಲ್ಲಿ ಹತ್ತಿಗೆ ಉತ್ತಮ ದರ ಇರುತ್ತಿತ್ತು. ಆದರೆ, ಈ ಬಾರಿ ಬೆಲೆ ಬಹಳಷ್ಟು ಇಳಿಮುಖವಾಗಿದೆ. ಪ್ರತಿ ಬಾರಿ ಕೇಂದ್ರ ಸರ್ಕಾರವು ಕಾಟನ್ ಕಾರ್ಪೋರೇಶನ್ ಆಫ್ ಇಂಡಿಯಾ (ಸಿಸಿಐ) ಮೂಲಕ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡುತ್ತದೆ. ಈ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಿ ರೈತರ ನೆರವಿಗೆ ಬರಬೇಕಾದ ಅಗತ್ಯವಿದೆ.

ಸದ್ಯ ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಹತ್ತಿಗೆ 5500 ರೂ. ಆಸುಪಾಸಿನಲ್ಲಿದೆ. ಆದರೆ, ಕೇಂದ್ರ ಸರ್ಕಾರ 2024&25ರಲ್ಲಿ ಉದ್ದ ಎಳೆಯ ಹತ್ತಿಗೆ ಪ್ರತಿ ಕ್ವಿಂಟಾಲ್ಗೆ 7521 ರೂ. ಬೆಂಬಲ ಬೆಲೆ ಘೋಷಣೆ ಮಾಡಿದೆ. ಕಿರು ಎಳೆಯ ಹತ್ತಿಗೆ ಕ್ವಿಂಟಾಲ್ಗೆ 7121 ರೂ. ನಿಗದಿ ಮಾಡಿದೆ. ಕಳೆದ ವರ್ಷದ ಬೆಂಬಲ ಬೆಲೆಗೆ (7020ರೂ.) ಹೋಲಿಸಿದರೆ ಮತ್ತೆ 501 ರೂ. ಹೆಚ್ಚಳ ಮಾಡಲಾಗಿದೆ.

ಕೇಂದ್ರ ಸರ್ಕಾರ ಘೋಷಣೆ ಮಾಡಿದಂತೆ ಸಿಸಿಐನವರು ಖರೀದಿ ಆರಂಭಿಸಬೇಕು. ಆದರೆ, ವಿಳಂಬ ಮಾಡಿರುವುದಕ್ಕೆ ಮುಕ್ತ ಮಾರುಕಟ್ಟೆಯಲ್ಲಿಯೂ ವರ್ತಕರು ಕಡಿಮೆ ದರಕ್ಕೆ ಟೆಂಡರ್ ಹಾಕುತ್ತಿದ್ದಾರೆ. ಇದರಿಂದ ರೈತರಿಗೆ ನಷ್ಟ ಉಂಟಾಗುತ್ತಿದೆ.

ಒಂದು ವೇಳೆ ಸರ್ಕಾರ ಖರೀದಿ ಆರಂಭಿಸಿದರೆ ಮಾರುಕಟ್ಟೆಯಲ್ಲಿಯೂ ತಾನಾಗಿಯೇ ದರ ಒಂದಿಷ್ಟು ಹೆಚ್ಚಾಗಲಿದೆ ಎನ್ನುತ್ತಾರೆ ತಜ್ಞರು.

ಜಿಲ್ಲೆಯ ಹತ್ತಿ ಕ್ಷೇತ್ರ:
ಧಾರವಾಡ ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಯಾಗಿ ಹತ್ತಿಯನ್ನು ಪ್ರತಿವರ್ಷ ಬೆಳೆಯಲಾಗುತ್ತದೆ. ಈ ಬಾರಿ ಕೃಷಿ ಇಲಾಖೆಯ ಗುರಿಗಿಂತ ಕಡಿಮೆ ಪ್ರಮಾಣದಲ್ಲಿ ಬಿತ್ತನೆಯಾಗಿದೆ. ಆದರೂ, ಸುಮಾರು 32 ಸಾವಿರ ಹೆಕ್ಟೇರ್ನಲ್ಲಿ ಹತ್ತಿ ಬಿತ್ತನೆಯಾಗಿದೆ. ಈ ವರ್ಷ 59 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಇತ್ತು. ಧಾರವಾಡ, ನವಲಗುಂದ, ಹುಬ್ಬಳ್ಳಿ, ಕುಂದಗೋಳ ಭಾಗದಲ್ಲಿ ಹೆಚ್ಚು ಬಿತ್ತನೆ ಮಾಡಿದ್ದಾರೆ.

ಈ ಬಾರಿ ಹೆಚ್ಚು ಮಳೆಯಾಗಿದ್ದರಿಂದ ಬಹಳಷ್ಟು ಕಡೆಗಳಲ್ಲಿ ಹತ್ತಿ ಬೆಳೆ ನೀರಲ್ಲಿ ನಿಂತು ಕೊಳೆತು ಹೋಗಿದೆ.

ಹತ್ತಿಯನ್ನು ಸಾಕಷ್ಟು ಗೊಬ್ಬರ, ಔಷಧ ಬಳಸಿ ಬೆಳೆಯಬೇಕಾಗುತ್ತದೆ. ಅಲ್ಲದೇ ಹೆಚ್ಚಿನ ಶ್ರಮವನ್ನೂ ಇದು ಬೇಡುತ್ತದೆ. ಬಿತ್ತನೆಯಿಂದ ಹಿಡಿದು ಹತ್ತಿ ಬಿಡಿಸುವ ತನಕ ಆಗಾಗ ಖರ್ಚು ವೆಚ್ಚಗಳು ಇದ್ದೇ ಇರುತ್ತವೆ.

ಬಿತ್ತನೆ ಸಂದರ್ಭದ ಗೊಬ್ಬರ, ನಂತರ ಬೆಳವಣಿಗೆ ಹಂತದಲ್ಲಿ ಕ್ರಿಮಿನಾಶಕ ಬಳಕೆ ಹೀಗೆ ಒಂದಿಲ್ಲೊಂದು ಖರ್ಚು, ಕೂಲಿಕಾಮಿರ್ಕರಿಗೆ ನೀಡುವ ಸಂಬಳ ಹೀಗೆ ಹಲವು ರೀತಿ ವೆಚ್ಚಗಳು ಇರುತ್ತವೆ. ಇದೆಲ್ಲವನ್ನೂ ತೂಗಿಸಿಕೊಂಡು ಮಾರಾಟ ಮಾಡಿದ ಹತ್ತಿಯಿಂದ ಒಂದಿಷ್ಟು ಲಾಭ ಸಿಗಲಿ ಎಂಬುದು ಬೆಳೆಗಾರರ ಆಶಯ.

ಕೇಂದ್ರ ಸಚಿವರಿಗೆ ಮನವಿ
ಸಿಸಿಐ ಮೂಲಕ ಹತ್ತಿ ಖರೀದಿ ಕೇಂದ್ರವನ್ನು ಕೂಡಲೇ ಪ್ರಾರಂಭ ಮಾಡಬೇಕೆಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಮನವಿ ಮಾಡಿದ್ದಾರೆ.

ತಮ್ಮ ಕ್ಷೇತ್ರವೂ ಸೇರಿ ಜಿಲ್ಲೆಯಲ್ಲಿ ಉತ್ತಮ ಹತ್ತಿ ಬೆಳೆಯಲಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಇರುವುದರಿಂದ ತಕ್ಷಣ ಕೇಂದ್ರ ಸರ್ಕಾರದ ಅಧೀನದ ಕಾಟನ್ ಕಾರ್ಪೋರೇಶನ್ ಆಫ್ ಇಂಡಿಯಾ ಮೂಲಕ ಖರೀದಿ ಪ್ರಕ್ರಿಯೆ ಆರಂಭಿಸಬೇಕು. ದರ ಕುಸಿದಾಗ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ರೈತರ ನೆರವಿಗೆ ಬರಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಶಾಸಕರು ಸಚಿವರಿಗೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net