ಐಷಾರಾಮಿ ಕಾರುಗಳಿಂದ ಅಪಘಾತ; ಮಾಲೀಕರ ಹೆಸರು ಹೇಳದ ಪೊಲೀಸ್

ACCIDENT
Published on

ಬೆಂಗಳೂರು: ಅತೀ ವೇಗವಾಗಿ ಅಡ್ಡಾದಿಡ್ಡಿಯಾಗಿ ಚಲಿಸಿದ ಐಷಾರಾಮಿ ಕಾರುಗಳಿಂದ ನಗರದಲ್ಲಿ ಭಾನುವಾರ ಪ್ರತ್ಯೇಕ ಎರಡು ಅಪಘಾತಗಳು ಸಂಭವಿಸಿವೆ.

ಮೇಕ್ರಿ ವೃತ್ತದ ಕೆಳಸೇತುವೆಯಲ್ಲಿ ಮಧ್ಯಾಹ್ನ 2.30ಕ್ಕೆ ಹೆಬ್ಬಾಳ ಕಡೆಯಿಂದ ಅತಿ ವೇಗವಾಗಿ ಬೆಂಟ್ಲಿ ಕಾರು ಚಲಾಯಿಸಿಕೊಂಡು ಬಂದ ಚಾಲಕ ನಿಯಂತ್ರಣ ತಪ್ಪಿ, ಆಟೋ ಮತ್ತು 2 ಬೈಕ್​ಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಸ್ಥಳದಲ್ಲಿದ್ದವರು ಚಾಲಕನನ್ನು ಹಿಡಿಯುವಷ್ಟರಲ್ಲಿ ಆತ ವಾಹನ ಬಿಟ್ಟು ಪರಾರಿಯಾಗಿದ್ದಾನೆ.

ಗಾಯಾಳು ಬೈಕ್ ಸವಾರ ಪ್ರಫುಲ್​ಕುಮಾರ್ (50) ಎಂಬುವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋ ಚಾಲಕ ಮತ್ತು ಸವಾರರಿಗೆ ಸಣ್ಣಪುಟ್ಟ ಪೆಟ್ಟಾಗಿದೆ. ಸ್ಥಳಕ್ಕೆ ಬಂದ ಸದಾಶಿವನಗರ ಸಂಚಾರ ಪೊಲೀಸರು ಕಾರು ವಶಕ್ಕೆ ಪಡೆದಿದ್ದಾರೆ. ಬೆಂಟ್ಲಿ ಕಾರು ತೆಲಂಗಾಣದಲ್ಲಿ ನೋಂದಣಿಯಾಗಿದ್ದು, ಮಾಲೀಕರ ಪತ್ತೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸದಾಶಿವನಗರ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಚೌಕಿಗೆ ಲ್ಯಾಂಬೋರ್ಗಿನಿ ಕಾರು ಡಿಕ್ಕಿ: ಕಬ್ಬನ್ ಪಾರ್ಕ್ ಸಮೀಪದ ಸಿಟಿಒ ಸರ್ಕಲ್​ನಲ್ಲಿ ಸಂಜೆ 5.30ರಲ್ಲಿ ಅತಿ ವೇಗವಾಗಿ ಬಂದ ಲ್ಯಾಂಬೋರ್ಗಿನಿ ಕಾರು ಪೊಲೀಸ್ ಚೌಕಿಗೆ ಡಿಕ್ಕಿ ಹೊಡೆದಿದೆ. ಕಬ್ಬನ್ ಪಾಕ್ ಸಂಚಾರ ಠಾಣೆ ಪೊಲೀಸರು ತಕ್ಷಣವೇ ಕಾರು ಚಾಲಕ ಮತ್ತು ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಮಾಲೀಕರ ಹೆಸರು ಹೇಳದ ಪೊಲೀಸ್: ಭಾನುವಾರವೇ ಎರಡು ಕಡೆಗಳಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಕಾರುಗಳು ಅಡ್ಡಾದಿಡ್ಡಿ ಚಲಾಯಿಸಿ ಅಪಘಾತಗಳಾಗಿವೆ. ಆದರೆ, ಸಂಚಾರ ಪೊಲೀಸರು ಮಾತ್ರ ಕಾರು ಮಾಲೀಕರು ಯಾರು, ಅದನ್ನು ಚಾಲನೆ ಮಾಡುತ್ತಿದ್ದವರು ಯಾರು ಎಂಬ ಮಾಹಿತಿ ನೀಡಲು ನಿರಾಕರಿಸುತ್ತಿದ್ದಾರೆ. ಪ್ರಭಾವಿಗಳ ಒತ್ತಡದಿಂದ ಮಾಹಿತಿ ಬಹಿರಂಗಪಡಿಸುತ್ತಿಲ್ಲ ಎಂದು ಆರೋಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net