ಕೋಡಿ ಕನ್ಯಾನದಲ್ಲಿ ಸಿಎಸ್ಪಿ ತರಬೇತಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆ

udp-22-csp sp ahad
Published on

ಉಡುಪಿ: ಕೋಡಿ ಕನ್ಯಾನದಲ್ಲಿ ಕರಾವಳಿ ಕಾವಲು ಪಡೆಗೆ ಸೇರಿದ 25 ಎಕ್ರೆ ಜಾಗದಲ್ಲಿ ​ ಪನ್ಸಿಂಗ್​ ಕಾರ್ಯ ಪೂರ್ಣಗೊಂಡಿದ್ದು, ಕೋಸ್ಟಲ್​ ಸೆಕ್ಯೂರಿಟಿ ಟೆನಿಂಗ್​ ಸೆಂಟರ್​ ಮತ್ತು ಸಮುದ್ರದಲ್ಲಿ ನಡೆದ ಅಪಘಾತಗಳಿಗೆ ತುರ್ತು ಚಿಕಿತ್ಸೆ ನೀಡಲು 25 ಬೆಡ್ಗಳ ಅಸ್ಪತ್ರೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಲ್ಪೆ ಕರಾವಳಿ ಕಾವಲು ಪೊಲೀಸ್​ ಅಧೀಕ್ಷಕ ಅಬ್ದುಲ್​ ಅಹದ್​ ತಿಳಿಸಿದ್ದಾರೆ.

ಉಡುಪಿ ಪತ್ರಿಕಾ ಭವನ ಸಮಿತಿ ವತಿಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕರಾವಳಿ ಕಾವಲು ಪಡೆಯಲ್ಲಿ ಪ್ರಸಕ್ತ 600ಕ್ಕೂ ಆಧಿಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಸಿಅರ್​ ಝಡ್​ ಪ್ರದೇಶ ಮತ್ತು ಸಮುದ್ರದಲ್ಲಿ 12 ನಾಟಿಕಲ್​ ಮೈಲು ದೂರದವರೆಗೆ ನಡೆಯುವ ಎಲ್ಲಾ ಚಟುವಟಿಕೆಗಳ ಮೇಲೆ ಇಲಾಖೆ ಗಮನಹರಿಸುತ್ತದೆ. ಸೀ-ಆ್ಯಂಬುಲೆನ್ಸ್​ ಅವಶ್ಯಕತೆ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.

ಮೀನುಗಾರರೊಂದಿಗೆ ಅವಿನಾಭಾವ ಸಂಬಂಧ
ದೇಶದ ರಕ್ಷಣೆ ವಿಚಾರದಲ್ಲಿ ಕರಾವಳಿ ಪೋಲಿಸ್​ ಪಡೆಗೆ ಮೀನುಗಾರರೇ ಪ್ರಮುಖ ಬಾತ್ಮೀದಾರರಾಗಿದ್ದು, ಯಾವುದೇ ಅಪರಿಚಿತ ಬೋಡ್ಗಳ ಚಲನವಲನಗಳ ಬಗ್ಗೆ ಇಲಾಖೆಗೆ ಮಾಹಿತಿಯನ್ನು ನೀಡುತ್ತಾರೆ. 3 ಜಿಲ್ಲೆಗಳಲ್ಲಿ ಸುಮಾರು 25 ಸಾವಿರಕ್ಕೂ ಅಧಿಕ ಬೋಟ್ಗಳು ಕಾರ್ಯಾಚರಿಸುತ್ತಿದ್ದು, ಮೀನುಗಾರರೊಂದಿಗೆ ಇಲಾಖೆ ಅವಿನಾಭಾವ ಸಂಬಂಧ ಹೊಂದಿದೆ. 1200ಕ್ಕೂ ಹೆಚ್ಚು ಮಂದಿ ಸಾಗರ ರಾದಳದ ಸದಸ್ಯರಾಗಿದ್ದಾರೆ ಎಂದರು.

13 ರಕ್ಷಣಾ ಕಾರ್ಯಾಚರಣೆ
ಈ ವರ್ಷ 13ಕ್ಕೂ ಹೆಚ್ಚು ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಮಾದಕ ವಸ್ತು ಸಾಗಾಟ ಪ್ರಕರಣಗಳು ಕಂಡುಬರದಿದ್ದರೂ ಈ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ. ಮಾದಕ ವಸ್ತು ಮಾರಾಟ ಸಾಮಾಜಿಕ ಪಿಡುಗು ಮಾತ್ರವಲ್ಲ ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ ಎಂಬುದಾಗಿ ಪರಿಗಣಿಸಲಾಗಿದೆ ಎಂದರು.

ವೈಬ್ರೆಂಟ್​ ವಿಲೇಜ್​
ಕೇಂದ್ರ ಸರ್ಕಾರ ಗಡಿಗ್ರಾಮಗಳಲ್ಲಿ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ವೈಬ್ರೆಂಟ್​ ವಿಲೇಜ್​ ಎಂಬ ಯೋಜನೆ ರೂಪಿಸಿದೆ. ಕರಾವಳಿ ಕಾವಲು ಪಡೆಯಿಂದ ಅನೇಕ ಗ್ರಾಮಗಳನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಭದ್ರತೆ ನಿಟ್ಟಿನಲ್ಲಿ ಕರಾವಳಿ ತೀರದಲ್ಲಿ 500ಕ್ಕೂ ಅಧಿಕ ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂದ ಅಧ್ಯಕ್ಷ ರಾಜೇಶ್​ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಜೀರ್​ ಪೊಲ್ಯ, ಪ್ರೆಸ್​ ಕ್ಲಬ್​ ಸಂಚಾಲಕ ಅಜಿತ್​ ಹಾರಾಡಿ ಉಪಸ್ಥಿತರಿದ್ದರು,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net