

* ಪಿ.ಬಿ.ಹರೀಶ್ ರೈ
ಮಂಗಳೂರು : ಹಿಂದಿನ ಚುನಾವಣೆಗಳಲ್ಲಿ ದಾಖಲೆ ಮತಗಳ ಅಂತರದ ಗೆಲುವು ಸಾಧಿಸಿದರೂ ಕರಾವಳಿಯ ಮೂವರು ಬಿಜೆಪಿ ನಾಯಕರು ಈ ಬಾರಿ ಟಿಕೆಟ್ ವಂಚಿತರಾಗಿರುವುದು ವಿಶೇಷ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಹಾಲಿ ಸಂಸದ ನಳಿನ್‌ಕುಮಾರ್ ಕಟೀಲ್ ಟಿಕೆಟ್ ವಂಚಿತರಾದರೆ, ಬೆಂಗಳೂರು ನಗರ ಉತ್ತರ ಕ್ಷೇತ್ರದಲ್ಲಿ ಡಿ.ವಿ.ಸದಾನಂದ ಗೌಡ ಬದಲು ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಲಾಗಿದೆ. ಮುಂಬೈ ನಾರ್ತ್ ಕ್ಷೇತ್ರದ ಬಿಜೆಪಿ ಸಂಸದ ಕರಾವಳಿ ಮೂಲದ ಗೋಪಾಲ್.ಸಿ.ಶೆಟ್ಟಿ ಅವರಿಗೂ ಹೈಕಮಾಂಡ್ ಟಿಕೆಟ್ ನಿರಾಕರಿಸಿದೆ.
2004ರ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರ ಹಾಗೂ 2009ರಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಗೆದ್ದು ಸಂಸತ್ ಪ್ರವೇಶಿಸಿದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು 2014ರ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ದಾಖಲೆಯ 2.29 ಲಕ್ಷ ಮತಗಳ ಅಂತರದ ಜಯ ಸಾಧಿಸಿದರು. ರಾಜ್ಯದ ಮೂರು ಕ್ಷೇತ್ರಗಳಲ್ಲಿ ಸಂಸದರಾಗಿ ಆಯ್ಕೆಯಾದ ಹೆಗ್ಗಳಿಕೆಗೂ ಪಾತ್ರರಾದರು. 2014ರ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಮತ್ತೆ ಚುನಾಯಿತರಾದ ಡಿ.ವಿ. ಕ್ಯಾಬಿನೆಟ್ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.
*ಉಡುಪಿಯಿಂದ ಶಿಫ್ಟ್ :
2019ರ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಅವರು 3.49 ಲಕ್ಷ ಮತಗಳ ಅಂತರದ ದಾಖಲೆಯ ಜಯ ಗಳಿಸಿದ್ದರು. ಈ ಬಾರಿ ಅದೇ ಕ್ಷೇತ್ರದಿಂದ ಟಿಕೆಟ್ ಪಡೆಯುವುದು ಅವರಿಗೆ ಸಾಧ್ಯವಾಗಲ್ಲಿ. ಆದರೆ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಪಡೆಯಲು ಯಶಸ್ವಿಯಾಗಿದ್ದಾರೆ. ಹತ್ತು ವರ್ಷದ ಹಿಂದೆ ಉಡುಪಿ ಕ್ಷೇತ್ರದಿಂದ ಬೆಂಗಳೂರು ಉತ್ತರಕ್ಕೆ ಶಿಫ್ಟ್ ಆಗಿದ್ದ ಡಿ.ವಿ.ಸದಾನಂದ ಗೌಡ ಅವರು ಈಗ ಸ್ಥಾನ ತೆರವುಗೊಳಿಸುವುದು ಅನಿವಾರ್ಯವಾಗಿದೆ.
* ಮುಂಬೈಯಲ್ಲಿ ಗೆದ್ದ ಗೋಪಾಲ್ ಶೆಟ್ಟಿ
ಮುಂಬೈ ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದ ಗೋಪಾಲ್.ಸಿ.ಶೆಟ್ಟಿ ಅವರು ಮೂಲತಃ ಪಡುಬಿದ್ರೆ ಸಮೀಪದ ಸಾಂತೂರಿನವರು.
2014ರ ಚುನಾವಣೆಯಲ್ಲಿ ಮುಂಬೈ ನಾರ್ತ್ ಕ್ಷೇತ್ರದಲ್ಲಿ ಆಗಿನ ಕಾಂಗ್ರೆಸ್ ಸಂಸದ ಸಂಜಯ ನಿರುಪಮ್ ವಿರುದ್ದ 4.46 ಲಕ್ಷ ಮತಗಳ ಅಂತರದ ಜಯ ಸಾಧಿಸಿ ಸಂಸತ್ ಪ್ರವೇಶಿಸಿದ್ದರು. 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಿತ್ರನಟಿ ಉರ್ಮಿಳಾ ಮಾತೋಂಡ್‌ಕರ್ ಅವರನ್ನು ದಾಖಲೆಯ 4.65 ಮತಗಳ ಅಂತರದಿಂದ ಸೋಲಿಸಿದ್ದರು. ಈ ಟಿಕೆಟ್ ವಂಚಿತರಾಗಿದ್ದಾರೆ. ಗೋಪಾಲ್ ಶೆಟ್ಟಿ ಅವರ ಬದಲು ಕೇಂದ್ರ ಸಚಿವ ಪಿಯೂಷ್ ಗೋಯಲ್ ಟಿಕೆಟ್ ಪಡೆದಿದ್ದಾರೆ.
* ಹ್ಯಾಟ್ರಿಕ್ ಜಯಕ್ಕೂ ಟಿಕೆಟ್ ಮಿಸ್
ದ.ಕ.ಕ್ಷೇತ್ರದಲ್ಲಿ ಹಿಂದಿನ ಚುನಾವಣೆಯಲ್ಲಿ ದಾಖಲೆಯ 2.74 ಲಕ್ಷ ಮತಗಳ ಅಂತರದ ಜಯ ಸಾಧಿಸಿದ , ಬಿಜೆಪಿಯ ರಾಜ್ಯಾಧ್ಯಕ್ಷರೂ ಆಗಿದ್ದ ನಳಿನ್‌ಕುಮಾರ್ ಕಟೀಲ್ ಅವರಿಗೆ ಈ ಬಾರಿ ಹೈಕಮಾಂಡ್ ಟಿಕೆಟ್ ನಿರಾಕರಿಸಿದೆ. ಕಟೀಲ್ ಈ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿದ್ದು, ಸುದೀರ್ಘ ವರ್ಷ ಕ್ಷೇತ್ರವನ್ನು ಪ್ರತಿನಿಧಿಸಿದ ದಾಖಲೆ ಕೂಡಾ ಹೊಂದಿದ್ದರು.