ಕರಾವಳಿಯಲ್ಲಿ ಕ್ರಿಸ್‌ಮಸ್ ಸರಳ ಆಚರಣೆ

chris
Published on

ಮಂಗಳೂರು/ಉಡುಪಿ: ಕೋವಿಡ್-19 ಹಿನ್ನೆಲೆಯಲ್ಲಿ ಯೇಸು ಕ್ರಿಸ್ತರ ಜನನದ ಹಬ್ಬವಾದ ಕ್ರಿಸ್‌ಮಸ್ ಶುಕ್ರವಾರ ಸರಳವಾಗಿ ನಡೆಯಿತು.

ಗುರುವಾರ ರಾತ್ರಿ ಚರ್ಚ್‌ಗಳಿಗೆ ತೆರಳಲು ಸಾಧ್ಯವಾಗದವರು ಶುಕ್ರವಾರ ಪೂಜೆ, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಗೋದಲಿ ರಚಿಸಿ ಪರಸ್ಪರ ಸಿಹಿ ಹಂಚಿ, ಶುಭಾಶಯ ಕೋರಿ ಹಬ್ಬವನ್ನು ಸಂಭ್ರಮಿಸಿದರು. ಉಡುಗೊರೆ, ಸಿಹಿತಿಂಡಿಗಳ ವಿತರಣೆ ಸಂಭ್ರಮ ಹಲವೆಡೆ ಮನೆಮಾಡಿತ್ತು. ಮನೆಗಳಲ್ಲಿ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ಸವಿದರು.

ಗುರುವಾರ ರಾತ್ರಿ ಕೆಥೊಲಿಕ್, ಸಿರಿಯನ್, ಪ್ರೊಟೆಸ್ಟೆಂಟ್, ಮಲಂಕರ ಮುಂತಾದ ಚರ್ಚ್‌ಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದವು. ಯೇಸು ಕ್ರಿಸ್ತರು ದನದ ಹಟ್ಟಿಯಲ್ಲಿ ಜನಿಸಿದರು ಎನ್ನುವುದರ ಸಂಕೇತವಾಗಿ ಚರ್ಚ್‌ಗಳಲ್ಲಿ ಮತ್ತು ಕ್ರೈಸ್ತರ ಮನೆಗಳಲ್ಲಿ ಆಕರ್ಷಕ ಗೋದಲಿಗಳು(ಕ್ರಿಬ್) ನಿರ್ಮಾಣಗೊಂಡಿದ್ದವು. ಪೂಜೆಯ ವೇಳೆ ಸಿಂಗರಿಸಿಟ್ಟ ಗೋದಲಿಯಲ್ಲಿ ಬಾಲಯೇಸು ಮೂರ್ತಿಯನ್ನು ಇಟ್ಟು ದೇವರ ಸ್ತುತಿ, ಜೋಗುಳದ ಮೂಲಕ ಆರಾಧಿಸಲಾಯಿತು.

ಮಂಗಳೂರು ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ದಾನ ಅವರು ನಗರದ ಕಾಸ್ಸಿಯಾ ಚರ್ಚ್‌ನಲ್ಲಿ ಬಲಿಪೂಜೆ ನೆರವೇರಿಸಿದರು. ಚರ್ಚ್ ಧರ್ಮಗುರು ಾ.ಎರಿಕ್ ಕ್ರಾಸ್ತಾ, ಫಾ.ಚಾಲ್ಸ್ ಮಿನೇಜಸ್, ಾ.ರೂಪೇಶ್ ಮಾಡ್ತ ಉಪಸ್ಥಿತರಿದ್ದರು.

ಪಾಲ್ದನೆಯ ಸಂತ ಥೆರೆಸಾ ಚರ್ಚ್‌ನಲ್ಲಿ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಉಪ ನಿರ್ದೇಶಕ ಫಾ.ಆಲ್ವಿನ್ ರಿಚರ್ಡ್ ಡಿಸೋಜ ನೇತೃತ್ವದಲ್ಲಿ ಬಲಿಪೂಜೆ ನೆರವೇರಿತು. ಈ ಸಂದರ್ಭ ಮಾತನಾಡಿದ ಫಾ.ಆಲ್ವಿನ್, ಸ್ತ್ರೀಯರನ್ನು ಗೌರವಿಸುವುದು, ದೇವರ ಮೇಲೆ ಭರವಸೆ ಇಡುವುದು, ಜೀವನದಲ್ಲಿ ಸೋತಾಗ ಆತ್ಮಹತ್ಯೆಯಂತಹ ನಿರ್ಧಾರ ಕೈಗೊಳ್ಳದಿರುವುದು, ನಾವೆಲ್ಲರೂ ದೇವರ ಮಕ್ಕಳೆಂದು ಭಾವಿಸಿ ಭಾವೈಕ್ಯದಿಂದ ಇರುವುದು ದೇವರ ಪ್ರೀತಿ ಗಳಿಸಲು ಇರುವ ದಾರಿಗಳು ಎಂದರು. ಚರ್ಚ್ ಧರ್ಮಗುರು ಆಲ್ವಿನ್ ಡಿಸೋಜ, ಪಾಲನಾ ಸಮಿತಿ ಉಪಾಧ್ಯಕ್ಷ ವಿಲಿಯಂ ಲೋಬೊ, ಕಾರ್ಯದರ್ಶಿ ಆಲ್ವಿನ್ ಮೊಂತೆರೊ ಉಪಸ್ಥಿತರಿದ್ದರು.

ಪ್ರವಾಸಿಗರ ಸಂಖ್ಯೆ ಹೆಚ್ಚಳ: ಕ್ರಿಸ್‌ಮಸ್ ಸರಣಿ ರಜೆ ಹಿನ್ನೆಲೆಯಲ್ಲಿ ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರಗಳಲ್ಲಿ ಜನಜಂಗುಳಿ ಹೆಚ್ಚಿತ್ತು. ಉಡುಪಿ ಕೃಷ್ಣ ಮಠ, ಕೊಲ್ಲೂರು ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಬೀಚ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡುಬಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net