ಕಾಸ್ಮಸ್​ ಕಾರ್ಯ ಶ್ಲಾನೀಯ

29 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಒಂದು ಸಂಸ್ಥೆ ಸ್ಥಾಪಿಸಿ ನೂರು ವರ್ಷಗಳ ಕಾಲ ಉತ್ತಮವಾಗಿ ಮುನ್ನಡೆಸುವುದು ಸಾಮಾನ್ಯದ ಮಾತಲ್ಲ. ಅಂತಹದ್ದರಲ್ಲಿ ಕಾಸ್ಮಸ್​ ಕ್ಲಬ್​ ಅನ್ನು 100 ವರ್ಷಗಳ ಕಾಲ ನಡೆಸಿದ್ದಲ್ಲದೆ, ರಾಷ್ಟ್ರ ಮಟ್ಟದ ಕ್ರೀಡಾಪಟುಗಳನ್ನು ನೀಡಿದೆ. ಇದಕ್ಕೆ ಸಂಸ್ಥೆ ಆಡಳಿತ ಮಂಡಳಿ ಕಾರ್ಯವೈಖರಿಯೇ ಕಾರಣ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.

ಇಲ್ಲಿನ ಜೆಎಸ್​ಎಸ್​ ಆವರಣದಲ್ಲಿನ ಸನ್ನಿಧಿ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾಸ್ಮಸ್​ ಕ್ಲಬ್​ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಬ್ರಿಟಿಷ್​ ಕಾಲದಲ್ಲಿ ಸ್ಥಾಪನೆಯಾದ ಕಾಸ್ಮಸ್​ ಕ್ಲಬ್​ ಮನರಂಜನೆಗೆ ಮಾತ್ರ ಸೀಮಿತವಾಗದೆ ಕ್ರೀಡಾಪಟುಗಳನ್ನು ಸಿದ್ಧಪಡಿಸುವ, ಕ್ರೀಡಾಸ್ಫೂರ್ತಿ ತುಂಬುವ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಸದಾ ಪ್ರೇರಣೆ ನೀಡುತ್ತಿದೆ. ಈ ಸಂಸ್ಥೆಯ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರ ಮಟ್ಟಕ್ಕೆ ತಲುಪಿರುವುದು ಧಾರವಾಡದ ಹೆಮ್ಮೆಯಾಗಿದೆ ಎಂದರು.

ನಗರದಲ್ಲಿ ಬರೀ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರೆ ಸಾಲದು. ವಿದ್ಯಾರ್ಥಿಗಳ ದೈಹಿಕ ಸಾಮರ್ಥ್ಯ ವೃದ್ಧಿಸಲು ಕ್ರೀಡೆಗಳೂ ಬೇಕು. ಹೀಗಾಗಿ ಹು-ಧಾ ಅವಳಿನಗರದಲ್ಲಿ ಕ್ರೀಡಾಪಟುಗಳ ಅನುಕೂಲಕ್ಕಾಗಿ ಕ್ರೀಡಾ ಸಂಕೀರ್ಣಗಳನ್ನು ಸ್ಥಾಪಿಸಲಾಗಿದೆ. ಇನ್ನು ಕೆಲ ದಿನಗಳಲ್ಲೇ ಅವುಗಳು ಕ್ರೀಡಾಪಟುಗಳ ಉಪಯೋಗಕ್ಕೆ ಮುಕ್ತವಾಗಲಿವೆ. ಇನ್ನೂ ಹೆಚ್ಚಿನ ಕ್ರೀಡಾಪಟುಗಳು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಲಿ ಎಂದು ಹಾರೈಸಿದರು.

ಕ್ಲಬ್​ನ ಮಾಜಿ ಅಧ್ಯಕ್ಷರಾದ ವಿ.ಡಿ. ಕಾಮರಡ್ಡಿ, ಎನ್​.ವಿ.ಬಿದರಿಮಠ, ಸಿ.ವಿ.ಮರದ, ಎನ್​.ಕೆ. ಎಲ್​. ಮಾಡೂಳ್ಳಿ, ಡಿ.ಎ.ಚಿಪ್ರೆ, ಎ.ಸಿ.ಪುರದ, ಬಿ.ಎಸ್​.ಭಟ್​, ರವಿ ನಾಯಕ, ರವಿ ಗಾಂವಕರ ಅವರಿಗೆ ಸನ್ಮಾನಿಸಲಾಯಿತು.

ಉಪಾಧ್ಯಕ್ಷ ಎಂ.ಎಂ. ಹಿರೇಮಠ, ಅಶೋಕ ಹಿರೇಮಠ, ಎಸ್​.ಬಿ. ಕಿತ್ತೂರ, ವಿಜಯ ಸುಣಗಾರ, ಸಿ.ಎಚ್​. ಜೋಗಿಹಳ್ಳಿ, ಎ.ಎಸ್​. ಗುಡ್ಡಮಠ, ಎಂ.ಎಸ್​. ಹಾಲಭಾವಿ, ಬಿ.ಎನ್​. ಜಮಖಂಡಿ, ಎಚ್​.ಎಫ್​. ಹೆಬ್ಬಾಳ, ಪದಾಧಿಕಾರಿಗಳು, ಇತರರು ಇದ್ದರು.

ಕಾಸ್ಮಸ ಕ್ಲಬ್​ ಅಧ್ಯಕ್ಷ ನಿತಿನ್​ ಟಗರಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರತಿ ದೇವಶಿಖಾಮಣಿ ನಿರೂಪಿಸಿದರು. ಎಸ್​.ಎಂ. ರುದ್ರಸ್ವಾಮಿ ವಂದಿಸಿದರು. ನಂತರ ಗಾಯಕಿ ಸಂಗೀತ ಕಟ್ಟಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net