

ಉಳ್ಳಾಲ: ಕುವೆಂಪು, ಕಾರಂತ, ಕಯ್ಯರರಂಥ ಲೇಖಕರು ಮಕ್ಕಳ ಸಾಹಿತ್ಯದಲ್ಲಿ ಸಾಕಷ್ಟು ಕೆಲಸ ಮಾಡಿದ್ದು, ಅವುಗಳಲ್ಲಿ ಮೌಲ್ಯ ಪ್ರತಿಪಾದನೆ ಮುಖ್ಯ ಉದ್ದೇಶ. ಸರಳ ನಿರೂಪಣೆಯಲ್ಲಿ ಮಕ್ಕಳ ಮನಸಿಗೆ ಮುಟ್ಟುವ ರೀತಿಯ ಸಾಹಿತ್ಯ ರಚನೆಗಳು ಆಗಿವೆ ಎಂದು ಉಳ್ಳಾಲ ತಾಲೂಕು ಕಸಾಪ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ಹೇಳಿದರು.
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ಹೋಬಳಿ ಘಟಕ ಮತ್ತು ಕೊಣಾಜೆ ವಿಶ್ವಮಂಗಳ ಪ್ರೌಢಶಾಲಾ ಸಹಯೋಗದಲ್ಲಿ ಶುಕ್ರವಾರ ಕನ್ನಡ ಸಂಭ್ರಮ-ಕುವೆಂಪು ಕಂಪು ಕಾರ್ಯಕ್ರಮದಲ್ಲಿ ಕುವೆಂಪು ಸಾಹಿತ್ಯದ ಕುರಿತು ಉಪನ್ಯಾಸ ನೀಡಿದರು.
ಮನುಷ್ಯ ಮನಸಿನ ಸಂಕುಚಿತ ಆಲೋಚನೆಗಳನ್ನು ದೂರ ಮಾಡಿ ಪ್ರತಿಯೊಬ್ಬರನ್ನೂ ವಿಶ್ವಮಾನವ ಮಾಡುವುದು ಸಾಹಿತ್ಯದ ಉದ್ದೇಶ. ಕುವೆಂಪು ಅವರ ಸಾಹಿತ್ಯ ಮತ್ತು ವೈಚಾರಿಕ ಚಿಂತನೆಗಳು ವಿಶ್ವಮಾನವತೆಯ ಪ್ರತಿಪಾದನೆ ಮಾಡುತ್ತದೆ ಎಂದರು.
ಮುಖ್ಯಶಿಕ್ಷಕಿ ಪ್ರಿಯಾ ಎನ್., ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪೂರ್ಣಿಮಾ ಡಿ.ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಶೋಭಾವತಿ, ಪೂರ್ವ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಹಂಸಗೀತ, ಕಸಾಪ ಉಳ್ಳಾಲ ಘಟಕದ ಕಾರ್ಯದರ್ಶಿ ಎಡ್ವರ್ಡ್ ಲೋಬೊ, ಸದಸ್ಯರಾದ ಪ್ರಸಾದ್ ರೈ ಕಲ್ಲಿಮಾರು, ರಾಧಾಕೃಷ್ಣ ರಾವ್ ಟಿ.ಡಿ., ಕೃಷ್ಣಕುಮಾರ್ ಕಮ್ಮಜೆ, ಮಂಜುಳಾ ಜಿ.ರಾವ್ ಇರಾ ಮೊದಲಾದವರು ಉಪಸ್ಥಿತರಿದ್ದರು.
ಚಂದ್ರಹಾಸ ಶೆಟ್ಟಿ ದೇರಳಕಟ್ಟೆ ಸ್ವಾಗತಿಸಿ, ಶಾಲಾ ಸಹಶಿಕ್ಷಕಿ ವನಿತಾ ವಂದಿಸಿದರು. ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು.
ಸಾಹಿತ್ಯದ ಮೂಲಕ ಭಾಷೆಯ ಬೆಳವಣಿಗೆ
ಕಸಾಪ ಉಳ್ಳಾಲ ಹೋಬಳಿ ಘಟಕ ಅಧ್ಯಕ್ಷೆ ವಿಜಯಲಕ್ಷ್ಮೀ ಪ್ರಸಾದ್ ರೈ ಕಲ್ಲಿಮಾರು ಅಧ್ಯಕ್ಷತೆ ವಹಿಸಿ, ಸಾಹಿತ್ಯದ ಮೂಲಕ ಭಾಷೆ ಬೆಳೆಯುತ್ತದೆ. ಇಂಗ್ಲಿಷ್ ಸೇರಿದಂತೆ ಎಷ್ಟು ಭಾಷೆಗಳನ್ನಾದರೂ ಕಲಿಯಿರಿ. ಆದರೆ ನಮ್ಮ ಕನ್ನಡ ಭಾಷೆ ಮರೆಯದಿರಿ ಎಂದರು. ವಿಶ್ವಮಂಗಳ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಪ್ರೊ.ವಿನಯ ರಜತ್ ಉದ್ಘಾಟಿಸಿ, ದ್ವೇಷ, ಅಸೂಯೆ, ಹಿಂಸೆಯನ್ನು ಮೀರಿದ ಮನಸ್ಸನ್ನು ಕಟ್ಟುವಲ್ಲಿ ಸಾಹಿತ್ಯದ ಅಭಿರುಚಿ ಮುಖ್ಯ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.