ಮೈಸೂರು: ನಗರದ ಪಡುವಾರಹಳ್ಳಿಯ ಎನ್.ಜೆ. ಆಸ್ಪತ್ರೆಯಲ್ಲಿ ಮಹಿಳೆಯರಿಗಾಗಿ ಕಾಸ್ಮೆಟಿಕ್ ಗೈನಕಾಲಜಿ ಘಟಕ ಆರಂಭಿಸಲಾಗಿದೆ ಎಂದು ಆಸ್ಪತ್ರೆಯ ಕಾಸ್ಮೆಟಿಕ್ ಸ್ತ್ರೀರೋಗ ಶಾಸ್ತ್ರಜ್ಞೆ ಡಾ.ಡಿ. ಸಿಂಧುಲಕ್ಷ್ಮೀ ತಿಳಿಸಿದರು.
ನಗರದಲ್ಲಿ ಪ್ರಥಮ ಎನ್ನಬಹುದಾದ ಈ ಘಟಕದಿಂದ ಗುಪ್ತಾಂಗಗಳಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿರುವ ಮಹಿಳೆಯರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಹಳಷ್ಟು ಮಹಿಳೆಯರು ಗುಪ್ತಾಂಗಗಳಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳುತ್ತಿದ್ದು, ಇವರು ಹೇಳಿಕೊಳ್ಳಲು ಸಂಕೋಚ, ಹಿಂಜರಿಕೆ ಭಾವನೆ ಇರುತ್ತದೆ. ಮೂತ್ರ, ಮಲ ಸೋರಿಕೆ, ಲೈಂಗಿಕತೆಗೆ ಅಡ್ಡಿ, ಸೋಂಕು ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ಪರಿಹಾರ ದೊರೆಯದೆ ಸಂಕಟ ಅನುಭವಿಸುತ್ತಿರುತ್ತಾರೆ ಎಂದು ಹೇಳಿದರು.
ಇದಕ್ಕೆ ಇದುವರೆಗೆ ಬಹುದೊಡ್ಡ ನಗರಗಳಲ್ಲಿ ಮಾತ್ರ ಶಸ್ತ್ರಚಿಕಿತ್ಸೆ ಇಲ್ಲದೇ ಲೇಸರ್ ವಿಧಾನದ ಚಿಕಿತ್ಸೆ ಲಭ್ಯವಿದೆ. ಆದರೆ ಈಗ ನಮ್ಮ ಆಸ್ಪತ್ರೆಯಲ್ಲಿಯೂ ಈ ನೂತನ ವಿಧಾನದ ಚಿಕಿತ್ಸೆಗೆ ಅಗತ್ಯವಾದ ಯಂತ್ರೋಪಕರಣ ಅಳವಡಿಸಿದ್ದು ತಜ್ಞರೂ ಇದ್ದಾರೆ. ಹೀಗಾಗಿ ಕಡಿಮೆ ವೆಚ್ಚದಲ್ಲಿಯೇ ಚಿಕಿತ್ಸೆ ಪಡೆದು ಸಮಸ್ಯೆಯಿಂದ ಹೊರಬರಬಹುದಾಗಿದೆ ಎಂದು ತಿಳಿಸಿದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸುಜೋತಿ ದುರ್ಗೇಶ್, ವೈದ್ಯೆ ಡಾ. ಮಮತಾ ಇತರರು ಇದ್ದರು.