

ಯಾದಗಿರಿ: ಹೊಸ ವರ್ಷದ ಸಂಭ್ರಮಾಚಾರಣೆಗೆ ಎಲ್ಲೆಡೆ ಭರ್ಜರಿ ಸಿದ್ಧತೆ ನಡೆಯುತಿದ್ದು, ಗಿರಿಜಿಲ್ಲೆ ಯಾದಗಿರಿಯಲ್ಲೂ ಈ ಬಾರಿ ಹೊಸ ವರ್ಷವನ್ನು ಸ್ವಾಗತಿಸಲು ಜನತೆ ಕಾತರರಾಗಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲಾದ್ಯಂತ ಚಳಿ ಹೆಚ್ಚಾಗಿದ್ದು, ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಯುವ ಜನತೆ ಹೊಸ ವರ್ಷ ಸ್ವಾಗತಕ್ಕೆ ಮುಂದಾಗಿದ್ದಾರೆ.
ಹೊಸ ವರ್ಷದ ಹಿನ್ನೆಲೆಯಲ್ಲಿ ನಗರದ ಎಲ್ಲ ಬೇಕರಿಗಳು ಫುಲ್ ರಶ್. ವಿವಿಧ ಆಕಾರಗಳಲ್ಲಿ ಬಣ್ಣ ಬಣ್ಣದ ಕೇಕ್ಗಳನ್ನು ಸಿದ್ಧಪಡಿಸಲಾಗಿದೆ. ಇದರ ಜತೆಯಲ್ಲಿ ಬಲೂನ್ ಮತ್ತು ಬ್ಯಾನರ್ಗಳಲ್ಲಿ ಹೊಸ ವರ್ಷದ ಸ್ವಾಗತದ ಬಗ್ಗೆ ಸ್ಲೋಗನ್ಗಳನ್ನು ಕಣ್ಣಿಗೆ ಬೀಳುತ್ತಿವೆ. ಹೊಸ ವರ್ಷವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲು ಕೆಲ ಸಂಘ ಸಂಸ್ಥೆಗಳು ನಗರದ ಬಡ ವರ್ಗದ ಜನತೆಗೆ ಉಚಿತವಾಗಿ ಅನ್ನ ಸಂತರ್ಪಣೆ ಮಾಡುತ್ತಿದ್ದಾರೆ.
2019ರ ವರ್ಷದ ಸಿಹಿ ಮತ್ತು ಕಹಿ ಘಟನೆಗಳನ್ನು ಮೆಲುಕು ಹಾಕುತ್ತಿರುವ ಜಿಲ್ಲೆಯ ಸಾರ್ವಜನಿಕರು ಹೊಸ ವರ್ಷದಲ್ಲಿ ಆಗಬೇಕಾದ ಬದಲಾವಣೆ, ಹೊಸ ಹೊಸ ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.