ರಾಕ್ಷಸ ರೂಪ ತಲುಪಿದ ಭ್ರಷ್ಟಾಚಾರ

30 mdg 10
Published on

ಮೂಡಿಗೆರೆ: ಸಮಾಜದಲ್ಲಿ ಭ್ರಷ್ಟಾಚಾರ ರಾಕ್ಷಸ ರೂಪ ತಲುಪಿದ್ದು, ಇಂತಹ ಅನಿಷ್ಟ ವ್ಯವಸ್ಥೆ ನಿರ್ಮೂಲನೆ ಮಾಡುವ ಮೂಲಕ ದೇಶವನ್ನು ಅಭಿವೃದ್ಧಿಕಡೆ ಮುನ್ನಡೆಸ ಬೇಕಿದೆ ಎಂದು ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಮಲ್ಲಿಕಾರ್ಜುನ್ ಹೇಳಿದರು.

ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ತಾಲೂಕು ಕಚೇರಿ ಸಿಬ್ಬಂದಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿ, ನಮ್ಮ ದೇಶದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಅಭಿವೃದ್ಧಿಗೆ ಭ್ರಷ್ಟಾಚಾರ ಅಡಚಣೆಯಾಗಿದೆ. ಭ್ರಷ್ಟಾಚಾರ ನಿರ್ಮೂಲನೆಗೆ ಸಾರ್ವಜನಿಕರು, ಸರ್ಕಾರಿ ಅಧಿಕಾರಿಗಳು, ನೌಕರರು ಒಟ್ಟಾಗಿ ಹೋರಾಟ ಮಾಡಬೇಕು.

ಕಚೇರಿ ಕೆಲಸಕ್ಕಾಗಿ ಅಲೆದಾಡುವ ಸಾರ್ವಜನಿಕರು ಜಾಗರೂಕರಾಗುವ ಅವಶ್ಯಕತೆಯಿದೆ. ಪ್ರಾಮಾಣಿಕತೆ ಮತ್ತು ನಿಷ್ಠೆಗೆ ಬದ್ಧರಾಗಿ ಭ್ರಷ್ಟಾಚಾರದ ವಿರುದ್ಧ ಸಮಾಜದಲ್ಲಿ ನಡೆಯುವ ಹೋರಾಟಕ್ಕೆ ಪ್ರತಿಯೊಬ್ಬರೂ ಬೆಂಬಲಿಸಬೇಕು. ವಿವಿಧ ಕ್ಷೇತ್ರದಲ್ಲಿ ದುಡಿಯುತ್ತಿರುವವರು ಕಾನೂನಿಗೆ ಗೌರವ ನೀಡಿದರೆ ಲಂಚ ಪಡೆಯುವುದಿಲ್ಲ ಎಂಬ ಶಪಥ ಕೈಗೊಂಡರೆ ಸಮಾಜ ಸುಸಂಸ್ಕೃತವಾಗುತ್ತದೆ ಎಂದರು.

ಕಚೇರಿ ಕೆಲಸದ ವೇಳೆ ಲಂಚಕ್ಕಾಗಿ ಪೀಡಿಸುವುದು ಕಂಡು ಬಂದರೆ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದರೆ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಲೋಕಾಯುಕ್ತ ಸಿಬ್ಬಂದಿಗ ಎಂ.ಪ್ರಸಾದ್, ರವಿಚಂದ್ರ ತಾಲೂಕು ಕಚೇರಿ ಸಿಬ್ಬಂದಿಗಳಾದ ರವಿ, ಕಮಲ, ಯೋಗೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net