ಸಹಕಾರ ಕ್ಷೇತ್ರದಲ್ಲೂ ಭ್ರಷ್ಟಾಚಾರ ತಾಂಡವ: ಶಾಸಕ ಜಿ.ಟಿ.ದೇವೇಗೌಡ ಕಳವಳ

5
Published on

ಮೈಸೂರು: ರಿಯಲ್ ಎಸ್ಟೇಟ್ ಮತ್ತು ಗಣಿ ಉದ್ಯಮಿಗಳು ಸಹಕಾರ ಕ್ಷೇತ್ರಕ್ಕೆ ಕಾಲಿಟ್ಟ ಮೇಲೆ ಭ್ರಷ್ಟಾಚಾರಕ್ಕೆ ನಾಂದಿಯಾಡಿದಂತಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರೂ ಅದ ಶಾಸಕ ಜಿ.ಟಿ.ದೇವೇಗೌಡ ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದಿಂದ ಮಾನಸಗಂಗೋತ್ರಿಯ ವಿಜ್ಞಾನಭವನದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲೆಯ ಪತ್ತಿನ ಸಹಕಾರ ಸಂಘಗಳ ಪದಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಒಂದು ದಿನದ ರಾಜ್ಯ ಮಟ್ಟದ ತರಬೇತಿ ಉದ್ಘಾಟಿಸಿ ಮಾತನಾಡಿದರು.

ಸಹಕಾರ ಕ್ಷೇತ್ರದಲ್ಲೂ ಇತ್ತೀಚೆಗೆ ಜಾತಿ ಮತ್ತು ಭ್ರಷ್ಟಾಚಾರ ಪ್ರವೇಶ ಮಾಡಿರುವುದು ಬಹಳ ವಿಷಾದನೀಯ. ಇದರೊಂದಿಗೆ ರಿಯಲ್ ಎಸ್ಟೇಟ್ ಮತ್ತು ಗಣಿ ಉದ್ಯಮಿಗಳು ಸೇರಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಅಲ್ಲದೇ ಸಹಕಾರ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪವೂ ಹೆಚ್ಚಾಗಿದೆ. ಚುನಾವಣೆಗಳಲ್ಲಿ ಹಣ ಕೊಡುವುದು ಹಾಗೂ ಉಡುಗೊರೆ ನೀಡಿದರೆ ಸಹಕಾರ ಕ್ಷೇತ್ರದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ಸಾಧ್ಯವಿಲ್ಲ. ನಾವು ಇದರಿಂದ ದೂರವಿದ್ದು ಸಹಕಾರ ಕ್ಷೇತ್ರವನ್ನು ಉಳಿಸಬೇಕು ಎಂದು ಕೋರಿದರು.

ಪ್ರಸ್ತುತ ದಿನಮಾನದಲ್ಲಿ ಸಹಕಾರ ಸಂಘಗಳ ಸದಸ್ಯರಿಗೆ ಮತ ಚಲಾಯಿಸಲು ಹಣ ಕೊಡಬೇಕಾದ ಪರಿಸ್ಥಿತಿ ಇದೆ. ಸಹಕಾರ ಕ್ಷೇತ್ರಕ್ಕೆ ಈಗ ರಿಯಲ್ ಎಸ್ಟೇಟ್ ಮತ್ತು ಗಣಿ ವಲಯವೂ ಕಾಲಿಟ್ಟ ಮೇಲೆ ದುಡ್ಡು ಕೊಡುವ ಸನ್ನಿವೇಶ ಸೃಷ್ಟಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬ್ಯಾಂಕ್ ವ್ಯವಹಾರ ಪ್ರಾಮಾಣಿಕವಾಗಿ ಇರಬೇಕು. ಆಯಾ ದಿನದಂದು ಲೆಕ್ಕ ಬರೆದಿಡಬೇಕು. ಸಾಲಗಾರರು ಮತ್ತು ಸದಸ್ಯರ ಸಂಪರ್ಕ ಇಟ್ಟುಕೊಳ್ಳಬೇಕು. ಉಳಿತಾಯ ಮಾಡುವ ಕೆಲಸಕ್ಕೆ ಪ್ರೇರಣೆ ನೀಡಬೇಕು. ಹೊಸಬರನ್ನು ಗುರುತಿಸಿ ಸಾಲ ಕೊಟ್ಟು ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಹಿವಾಟು ಮಾಡುವಂತೆ ಪ್ರೇರೇಪಿಸಬೇಕು. ತರಬೇತಿ ವೇಳೆ ತಪ್ಪದೆ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಮೈಸೂರು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, ದಶಕಗಳಿಂದಲೂ ಸಹಕಾರ ಕ್ಷೇತ್ರ ಪ್ರಮುಖ ಪಾತ್ರ ವಹಿಸಿಕೊಂಡು ಬಂದಿದೆ. ಸಹಕಾರಿ ಕ್ಷೇತ್ರದ ಸೇವೆ ಮಾಡುವುದು ಎಂದರೆ ಜನರ ಸೇವೆ ಮಾಡಿದಂತೆ. ಸದಸ್ಯರ ಹಿತಚಿಂತನೆ, ಠೇವಣಿದಾರರ ಹಿತ ಕಾಪಾಡುವುದು ಮುಖ್ಯ ಎಂದರು.

ಸರ್ಕಾರ ಜಾರಿಗೆ ತರುವ ಹೊಸ ಕಾನೂನು ತಿಳಿಸಬೇಕು. ಪ್ರತಿಯೊಂದು ಮಾಹಿತಿಯನ್ನು ಪರಿಗಣಿಸಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಯಾವುದೇ ಸಮಸ್ಯೆ ಇಲ್ಲದೆ ಬ್ಯಾಂಕ್ ವಹಿವಾಟನ್ನು ಗೊಂದಲ ಇಲ್ಲದಂತೆ ಮಾಡಬಹುದು ಎಂದು ಹೇಳಿದರು.

ಕರ್ನಾಟಕ ರಾಜ್ಯ ಪತ್ತಿನ ಸಹಕಾರ ಮಹಾಮಂಡಳದ ನಿರ್ದೇಶಕರಾದ ಬಿ.ಸಿ.ಲೋಕಪ್ಪ ಗೌಡ, ಬಿ.ಜುಂಕರ ಶೆಟ್ಟಿ ಇಂದ್ರಾಳಿ, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರಾದ ಪ್ರಶಾಂತ್ ತಾತಾಚಾರ್, ಈರೇಗೌಡ, ಭೈರಪ್ಪ, ಮಹದೇವಸ್ವಾಮಿ, ಸಿದ್ದೇಗೌಡ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಎಂ.ವಿಶ್ವೇಶ್ವರಯ್ಯ, ಬ್ಯಾಂಕಿಂಗ್ ತರಬೇತುದಾರ ಆರ್.ಕೆ.ಬಾಲಚಂದ್ರ, ವೈಜ್ಞಾನಿಕ ಸಂಶೋಧಕ ಎ.ಎಚ್. ಸಾಗರ್, ಕೆಐಸಿಎಂ ಪ್ರಾಂಶುಪಾಲ ಪುಟ್ಟಸ್ವಾಮಿ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಮನೋಜ್, ವ್ಯವಸ್ಥಾಪಕ ಹರೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net