ಸಮಾಜದಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ

16 krp 01
Published on

ಕೆ.ಆರ್.ಪೇಟೆ: ಹಣ ಸಂಪಾದಿಸುವ ಭರದಲ್ಲಿ ಸಾರ್ವಜನಿಕರನ್ನು ಮನಬಂದಂತೆ ದೋಚುವ ಪ್ರವೃತ್ತಿಯುಳ್ಳವರಿಂದ ಸಮಾಜದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಕಳವಳ ವ್ಯಕ್ತಪಡಿಸಿದರು.


ತಾಲೂಕಿನ ಬೆಡದಹಳ್ಳಿ ಗ್ರಾಮದ ಬಳಿಯ ಶ್ರೀ ಪಂಚಭೂತೇಶ್ವರ ಮಠದಲ್ಲಿ ಅಮಾವಾಸ್ಯೆ ಅಂಗವಾಗಿ ಇತ್ತೀಚೆಗೆ ಏರ್ಪಡಿಸಿದ್ದ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಯಾರಲ್ಲಿ ಹಣದ ಮೋಹ ಹೆಚ್ಚಾಗಿರುತ್ತದೆಯೋ ಅವರು ಎಂದಿಗೂ ಸಮಾಜವನ್ನು ಸರಿದಾರಿಗೆ ತರಲಾರರು. ಈ ಕಾರಣದಿಂದಲೇ ಭ್ರಷ್ಟಾಚಾರ ಎಲ್ಲೆಡೆ ವ್ಯಾಪಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಹಿಂದೆ ನಾಗರಿಕ ಸಮಾಜದಲ್ಲಿ ಹೆಚ್ಚು ಓದಿದವರಿಗೆ, ಅಧಿಕಾರಿಗಳಿಗೆ ಹಾಗೂ ರಾಜಕಾರಣಿಗಳಿಗೆ ಬೆಲೆ ಇತ್ತು. ಆದರೆ ಇಂದು ಜೈಲಿಗೆ ಹೋಗಿ ಬಂದವರಿಗೆ ಹೂಮಾಲೆ ಹಾಕಿ ಸ್ವಾಗತಿಸಿ ಅವರನ್ನು ಮೆರವಣಿಗೆ ಮಾಡುವ ಮಟ್ಟಿಗೆ ಸಮಾಜ ತಲುಪಿದೆ. ಆದ್ದರಿಂದ ಯುವಜನರು ಹಾಗೂ ವಿದ್ಯಾರ್ಥಿಗಳು ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕಿದೆ. ನಮ್ಮ ಕಣ್ಣೆದುರಿನಲ್ಲಿ ನಡೆಯುತ್ತಿರುವ ಅನ್ಯಾಯವನ್ನು ಗಟ್ಟಿ ಧ್ವನಿಯಲ್ಲಿ ಪ್ರಶ್ನೆ ಮಾಡುವ ಛಾತಿಯನ್ನು ಬೆಳೆಸಿಕೊಂಡು ಮುನ್ನಡೆದರೆ ಮಾತ್ರ ಹಾದಿ ತಪ್ಪುತ್ತಿರುವ ಅಧಿಕಾರಿಗಳು ಸೇರಿದಂತೆ ಇಡೀ ಸಮಾಜವನ್ನೇ ಸರಿದಾರಿಯಲ್ಲಿ ತರಲು ಸಾಧ್ಯವಿದೆ ಎಂದರು.


ದೇವರೂರು ಮಾನವಧರ್ಮ ಪೀಠದ ಶ್ರೀ ಮಾದೇಶ್ ಗುರೂಜಿ ಆಶೀರ್ವಚನ ನೀಡಿದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ಆರ್.ರವಿಶಂಕರ್, ಬೆಡದಹಳ್ಳಿಯ ಪಂಚಭೂತೇಶ್ವರ ಕ್ಷೇತ್ರದ ಪೀಠಾಧಿಪತಿ ಶ್ರೀ ರುದ್ರಮುನಿ ಸ್ವಾಮೀಜಿ, ರೈತ ಮುಖಂಡ ಬಿ.ಬಾಚಹಳ್ಳಿ ಪ್ರಸನ್ನ, ಕಾಡುಮೆಣಸಚಂದ್ರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net