

ಹುಬ್ಬಳ್ಳಿ : ಪೊಲೀಸ್ ಇಲಾಖೆಯ ಎಲ್ಲ ಕಚೇರಿಗಳ ಅನುಪಯುಕ್ತ ವಾಹನಗಳು ಹಾಗೂ ಸಾಮಗ್ರಿಗಳನ್ನು ವಿಲೇವಾರಿ ಮಾಡುವ ನೇರ ಗುತ್ತಿಗೆಯನ್ನು ತುಮಕೂರು ಜಿಲ್ಲೆಯ ತಿಪಟೂರಿನ ರೈತ ಸೇವಾ ಅಗ್ರಿಕಲ್ಚರಲ್ ಡೆವಲಪಮೆಂಟ್ ಇಂಡಸ್ಟ್ರೀಸ್ ಎಂಬ ಸಂಸ್ಥೆಗೆ ನೀಡುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತೊಂದು ಬಹುಕೋಟಿ ಹಗರಣ ನಡೆಸಿದೆ ಎಂದು ವಿಧಾನಸಭೆ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಆರೋಪಿಸಿದ್ದಾರೆ.
ಇಲ್ಲಿನ ಅರವಿಂದ ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ, ಮುಡಾ ಹಗರಣದಲ್ಲಿ ಈಗಾಗಲೇ ರಾಜ್ಯ ಸರ್ಕಾರ ಸಿಲುಕಿದ್ದು, ಇದೀಗ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ ಎಂದರು.
ತಿಪಟೂರಿನ ರೈತ ಸೇವಾ ಅಗ್ರಿಕಲ್ಚರಲ್ ಡೆವಲಪಮೆಂಟ್ ಇಂಡಸ್ಟ್ರೀಸ್ ಎಂಬ ಸಂಸ್ಥೆಯನ್ನು ನಡೆಸುತ್ತಿರುವ ಮುಸ್ಲಿಂ ಉದ್ಯಮಿಗೆ ಸರ್ಕಾರ ಮಣೆ ಹಾಕಿದೆ ಎಂದು ದೂರಿದರು.
ಸರ್ಕಾರಿ ಹಳೇ ವಾಹನಗಳು ಸೇರಿದಂತೆ ಯಾವುದೇ ಸಾಮಗ್ರಿಗಳನ್ನು ವಿಲೇವಾರಿ ಮಾಡಬೇಕಾದರೆ ನಿಯಮದ ಪ್ರಕಾರ ಟೆಂಡರ್ ಕರೆದು ಗುತ್ತಿಗೆ ನೀಡಲಾಗುತ್ತದೆ. ಆದರೆ, ಪೊಲೀಸ್ ಇಲಾಖೆಗೆ ಸಂಬಂಧಿಸಿದ ಹಳೇ ವಾಹನ, ಇತರ ವಸ್ತುಗಳ ವಿಲೇವಾರಿಗೆ ರಾಜ್ಯ ಸರ್ಕಾರ ಯಾವುದೇ ರೀತಿಯ ಟೆಂಡರ್ ಕರೆದಿಲ್ಲ.
ತಿಪಟೂರಿನ ಸಂಸ್ಥೆ ಮುಸ್ಲಿಮ್ ವ್ಯಕ್ತಿಗೆ ಸೇರಿದೆ, ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೈಸೂರು ಜಿಲ್ಲೆಗೆ ಆ ವ್ಯಕ್ತಿ ಸೇರಿದವ ಎಂಬ ಕಾರಣಕ್ಕಾಗಿ ನೇರ ಗುತ್ತಿಗೆ ನೀಡಲಾಗಿದೆ ಎಂದು ದೂರಿದರು.
ಮುಸ್ಲಿಮ್ ಮತ ಬ್ಯಾಂಕ್ಗಾಗಿ ಸಿದ್ದರಾಮಯ್ಯ ಸರ್ಕಾರ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದೆ. ಸಿದ್ದರಾಮಯ್ಯ ಸರ್ಕಾರ ಸಂವಿಧಾನ ವಿರೋಧಿ ಕಾರ್ಯದಲ್ಲಿ ತೊಡಗಿದೆ ಎಂದು ಆಪಾದಿಸಿದರು.
ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ, ದತ್ತಮೂರ್ತಿ ಕುಲಕರ್ಣಿ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.