

ಮಂಡ್ಯ: ಉಪ ನೋಂದಣಿ ಕಚೇರಿಯಲ್ಲಿ ನೋಂದಣಿಗಾಗಿ ಸಾವಿರಾರೂ ರೂ ಲಂಚ ಕೊಡಬೇಕು. ಆದ್ದರಿಂದ ಕೂಡಲೇ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಮಂಡ್ಯ ತಾಲೂಕು ರೈತ ಸಂಘದಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಚೇರಿ ಆವರಣದಲ್ಲಿ ಧರಣಿ ನಡೆಸಿದ ರೈತ ಸಂಘದ ಕಾರ್ಯಕರ್ತರು, ತಪ್ಪಿತಸ್ಥರ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು. ಪ್ರಮುಖವಾಗಿ ನೋಂದಣಿ ಮಾಡಿಸಿಕೊಳ್ಳಲು ಸರ್ಕಾರ ನಿಗದಿಪಡಿಸಿರುವ ಶುಲ್ಕದ ಮಾಹಿತಿಯನ್ನು ಕಡ್ಡಾಯವಾಗಿ ಸಾರ್ವಜನಿಕರಿಗೆ ಕಾಣುವಂತೆ ಪ್ರಕಟಿಸಬೇಕೆಂದು ಆಗ್ರಹಿಸಿದರು.
ಪ್ರತಿ ನೋಂದಣಿ ಮಾಡಿಸಿಕೊಳ್ಳಬೇಕಾದರೂ 2 ಸಾವಿರ ರೂನಿಂದ 5 ಸಾವಿರ ರೂವರೆಗೆ ಹಣ ನಿಗದಿ ಮಾಡಲಾಗಿದೆ. ಇಲ್ಲದಿದ್ದರೆ ಕಡತವನ್ನು ನೋಡುವುದೇ ಇಲ್ಲ. ಇದಲ್ಲದೆ ಸಾಲದ ಮಾರ್ಟ್ ಗೇಜ್ ಮಾಡಲು 300 ರೂನಿಂದ 500 ರೂವರೆಗೆ ಲಂಚ ಪಡೆಯಲಾಗುತ್ತಿದೆ. ರಿಜಿಸ್ಟರ್ ಪತ್ರ ಪಡೆಯಲು ಬಂದಾಗ ಸೀಲ್ ಹಾಕಲು 50 ರೂ ನೀಡಬೇಕು. ಲಂಚ ಕೊಡದಿದ್ದರೆ ಯಾವುದೇ ಕೆಲಸವೂ ಆಗುವುದಿಲ್ಲ. ಉಪ ನೋಂದಣಿ ಕಚೇರಿಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಆದ್ದರಿಂದ ಕೂಡಲೇ ತಹಸೀಲ್ದಾರ್ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅಧ್ಯಕ್ಷ ಶಿವಳ್ಳಿ ಚಂದ್ರಶೇಖರ್, ಕಾರ್ಯದರ್ಶಿ ಹರೀಶ್, ಕೋಶಾಧ್ಯಕ್ಷ ನಿಂಗೇಗೌಡ, ಕೃಷ್ಣಪ್ಪ ಕನ್ನಲಿ, ಬೊಮ್ಮೇಗೌಡ, ರಾಮಲಿಂಗೇಗೌಡ, ಜವರೇಗೌಡ ಇತರರಿದ್ದರು.