ಕೆರೆ ಗುತ್ತಿಗೆಯಲ್ಲೂ ಅಕ್ರಮದ ಕೆಸರು ; ಸಣ್ಣ ನೀರಾವರಿ ಇಲಾಖೆಯಲ್ಲಿ ಭ್ರಷ್ಟಾಚಾರ

09Tmk_MI_Tender_02 NEW
Published on

ತುಮಕೂರು : ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಅವ್ಯವಹಾರ ಬಗೆದಷ್ಟೂ ಬಯಲಾಗುತ್ತಿವೆ. ಇಲಾಖೆಯಲ್ಲಿ ಕೆಲವೇ ಕೆಲವು ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ಟೆಂಡರ್ ನಿಯಮಗಳನ್ನೇ ಗಾಳಿಗೆ ತೂರಲಾಗುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಕಣ್ಮುಚ್ಚಿ ಕುಳಿತಿರುವುದು ಅನುಮಾನ ಮೂಡಿಸಿದೆ.

50 ಲಕ್ಷ ರೂ. ಮೇಲ್ಪಟ್ಟ ಕಾಮಗಾರಿಗಳಿಗೆ ದ್ವಿ ಲಕೋಟೆಯಲ್ಲಿ ಟೆಂಡರ್ ಆಹ್ವಾನಿಸಲಾಗುತ್ತಿದೆ, ಕುಡಿಯುವ ನೀರು ಯೋಜನೆ ಅಥವಾ ತುರ್ತು ಸಂದರ್ಭದಲ್ಲಿ ಅಲ್ಪಾವಧಿ ಟೆಂಡರ್ ಕರೆಯಲು ಅವಕಾಶವಿದೆ, ತುಮಕೂರು ವಿಭಾಗದಲ್ಲಿ ಆಹ್ವಾನಿಸಿರುವ ಬಹುತೇಕ ದ್ವಿ ಲಕೋಟೆ ಟೆಂಡರ್‌ಗಳಲ್ಲಿ ಭಾಗವಹಿಸಲು ಕೇವಲ 7 ದಿನ ಅವಕಾಶ ನೀಡಿರುವುದು ಅಚ್ಚರಿ ಮೂಡಿಸಿದೆ.

ಬಿಡ್ ಸಾಮರ್ಥ್ಯ ಇಲ್ಲದಿದ್ದರೂ ಗುತ್ತಿಗೆ: ಜಿಲ್ಲೆಯಲ್ಲಿ ಕೋಟಿಗಟ್ಟಲೇ ಅಂದಾಜು ಮೊತ್ತದ ಕಾಮಗಾರಿಗಳು ಕೆಲವೇ ಕೆಲವು ಗುತ್ತಿಗೆದಾರರಿಗೆ ಲಭ್ಯವಾಗುತ್ತಿದೆ. ಬಹುತೇಕ ಕಾಮಗಾರಿಗಳು ಅಂದಾಜು ಮೊತ್ತಕ್ಕಿಂತ ಶೇ.3ಕ್ಕಿಂತ ಜಾಸ್ತಿಗೆ ಸಿಕ್ಕಿರುವುದು ಸೋಜಿಗ. ಗುತ್ತಿಗೆದಾರ ಒಂದೇ ಆರ್ಥಿಕ ವರ್ಷದಲ್ಲಿ ಆರ್ಥಿಕ ಸಾಮರ್ಥ್ಯ ಮೀರಿ ಪದೇಪದೆ ಪಡೆದವರೇ ಗುತ್ತಿಗೆ ಪಡೆಯುತ್ತಿರುವ ಕಾಮಗಾರಿ ನಿರೀಕ್ಷಿತ ಪ್ರಗತಿಗೆ ಅಡ್ಡಿಯಾಗಿದೆ. ಅಂದಾಜು ಮೊತ್ತಕ್ಕಿಂತ ಹೆಚ್ಚು ದರಕ್ಕೆ ಗುತ್ತಿಗೆ ನೀಡಿ ಸರ್ಕಾರಕ್ಕೆ ನಷ್ಟ ಮಾಡುತ್ತಿರುವ ಜತೆಗೆ ನಿಯಮಗಳನ್ನು ಗಾಳಿಗೆ ತೂರುತ್ತಿರುವ ಬಗ್ಗೆ ಉನ್ನತ ಮಟ್ಟದ ತನಿಖೆಯ ಅಗತ್ಯವಿದೆ.

ಚಿಕ್ಕನಾಯಕನಹಳ್ಳಿ ತಾಲೂಕು ಜಾಣೆಹಾರ್‌ನಲ್ಲಿ 2.18 ಕೋಟಿ ರೂ., ಗಂಟೇನಹಳ್ಳಿ ಕೆರೆ 2.66 ಕೋಟಿ ರೂ. ಕಾಮಗಾರಿ, ಪಾವಗಡ ತಾಲೂಕು ರಾಯಚರ್ಲು 86.30ಲಕ್ಷ ರೂ. ಕಾಮಗಾರಿ, ಶಿರಾ ನಗರದ ಬೋರಸಂದ್ರ, ಪದ್ಮಾಪುರ, ಗಾಜಿಗಾರಹಳ್ಳಿ, ಬೋರಸಂದ್ರದ ಕೆರೆ ಅಭಿವೃದ್ಧಿಯ 71.37 ಲಕ್ಷ ರೂ. ಕಾಮಗಾರಿ, ಕೊಟ್ಟ, ಪುರ್ವಹಳ್ಳಿ, ವೀರನಾಗನಹಳ್ಳಿ, ಕದಿರೆಹಳ್ಳಿ, ವೀರಾಪುರದ ಕಾಮಗಾರಿ ಸೇರಿ ಜಿಲ್ಲೆಯಲ್ಲಿ 50 ಲಕ್ಷ ರೂ. ಮೇಲ್ಪಟ್ಟ ಬಹುತೇಕ ಕಾಮಗಾರಿ ಗುತ್ತಿಗೆ ನೀಡುವಲ್ಲಿ ಗೋಲ್ಮಾಲ್ ನಡೆದಿರುವ ಶಂಕೆಯಿದೆ.

ಗಂಗಸಂದ್ರ, ಮರಳೂರು ಕೆರೆ ಗುತ್ತಿಗೆಯಲ್ಲೂ ಗೋಲ್‌ಮಾಲ್?: ತುಮಕೂರು ತಾಲೂಕು ಶೆಟ್ಟಿಹಳ್ಳಿ ಕೆರೆ ಗುತ್ತಿಗೆ ಅಕ್ರಮದಂತೆ ಗಂಗಸಂದ್ರ ಕೆರೆ ಆಧುನೀಕರಣದ 5 ಕೋಟಿ ರೂ. ಕಾಮಗಾರಿ ಗುತ್ತಿಗೆಯಲ್ಲಿಯೂ ಅಕ್ರಮಕ್ಕೆ ಅವಕಾಶವಾಗಿರುವ ಸಂದೇಹ ಗುತ್ತಿಗೆದಾರರ ವಲಯದಲ್ಲಿ ಮೂಡಿದೆ. 5.54 ಕೋಟಿ ರೂ. ಅಂದಾಜು ವೆಚ್ಚದ ಕಾಮಗಾರಿಗೆ ಜೂ.21ರಂದು ಟೆಂಡರ್ ಆಹ್ವಾನಿಸಿದ್ದು, ಜೂ.28ರವರೆಗೆ ಅವಕಾಶ ನೀಡಲಾಗಿದೆ, ಈ 8 ದಿನದಲ್ಲಿ 2 ಸರ್ಕಾರಿ ರಜೆಗಳಿದ್ದು ದಾಖಲೆಗಳನ್ನು ಪಡೆಯಲು ಗುತ್ತಿಗೆದಾರರಿಗೆ ಅವಕಾಶವಾಗದಂತೆ ಮಾಸ್ಟರ್ ಪ್ಲ್ಯಾನ್ ಸಣ್ಣ ನೀರಾವರಿ ಇಲಾಖೆ ತಾಂತ್ರಿಕ ಶಾಖೆಯಲ್ಲಿಯೇ ಮಾಡಲಾಗಿದೆ. ಮರಳೂರು ಅಮಾನಿಕೆರೆ ಆಧುನಿಕರಣಕ್ಕೆ 1.33ಕೋಟಿ ರೂ. ಟೆಂಡರ್ ಕೂಡ 2021ರ ಏ.19ರಂದು ಆಹ್ವಾನಿಸಲಾಗಿದ್ದು 27ರವರೆಗೆ ಅವಕಾಶ ನೀಡಲಾಗಿದೆ.

ಅಧಿಕಾರಿಗಳಿಗೆ ತಿರುಪತಿ ಪ್ರವಾಸ?: ಸಣ್ಣ ನೀರಾವರಿ ಇಲಾಖೆಯ ತಾಂತ್ರಿಕ ವಿಭಾಗದ ಕೆಲವು ಅಧಿಕಾರಿಗಳು ಗುತ್ತಿಗೆಗಳನ್ನು ಕೆಲವರಿಗಷ್ಟೇ ನೀಡಲು ಹುನ್ನಾರ ನಡೆಸಿರುವುದು ಅಂಕಿ, ಅಂಶಗಳನ್ನು ನೋಡಿದರೆ ಗೊತ್ತಾಗುತ್ತಿದೆ. ತಮಗೆ ಲಾಭವಾಗುವ ಗುತ್ತಿಗೆದಾರ ಟೆಂಡರ್‌ನಲ್ಲಿ ಭಾಗವಹಿಸುವಂತೆ ನಿಮಯಗಳನ್ನು ಅವರಿಗೆ ಬೇಕಾದಂತೆ ಮಾಡಿಕೊಂಡು ಸರ್ಕಾರಕ್ಕೂ ವಂಚಿಸಲಾಗಿದೆ. ಗುತ್ತಿಗೆದಾರರಿಗೆ ಸಹಾಯಕವಾಗುವಂತೆ ಕೆಲಸ ಮಾಡುತ್ತಿರುವ ಕಾರಣಕ್ಕೆ ಕೆಲವು ಅಧಿಕಾರಿಗಳು ಅವರ ಕುಟುಂಬಗಳನ್ನು ಆಗಿಂದಾಗ್ಗೆ ತಿರುಪತಿ ಪ್ರವಾಸ, ಕೈತುಂಬ ಹಣ ನೀಡುತ್ತಿರುವ ಆರೋಪ ಕೂಡ ಇದೆ. ಕಳೆದ ಹತ್ತು ವರ್ಷದಿಂದ ಜಿಲ್ಲೆಯಲ್ಲಿ ಬೀಡುಬಿಟ್ಟಿರುವ ಎಲ್ಲ ಅಧಿಕಾರಿಗಳು ತಾವೇ ಗುತ್ತಿಗೆದಾರರಾಗಿ ಬೇರೆಯವರ ಹೆಸರಿನಲ್ಲಿ ಕೆಲಸ ಮಾಡುತ್ತಿರುವ ಆರೋಪವಿದೆ.

ಕಾಮಗಾರಿ ಶೀಘ್ರವಾಗಿ ಆಗಲಿ ಎಂಬ ಉದ್ದೇಶದಿಂದ ಅಲ್ಪಾವಧಿ ಟೆಂಡರ್ ಕರೆಯಲು ಅವಕಾಶವಿದೆ. ಹಾಗಾಗಿ, ಜಿಲ್ಲೆಯಲ್ಲಿ ಯಾವ ಕಾರಣಕ್ಕೆ 7 ದಿನ ನೀಡಿದ್ದಾರೆ ಎಂಬ ಬಗ್ಗೆ ಪರಿಶೀಲಿಸುತ್ತೇನೆ. ಶೆಟ್ಟಿಹಳ್ಳಿ ಕೆರೆ ಅಭಿವೃದ್ಧಿಗೆ ತುಮಕೂರು ಜಿಪಂ ಕೂಡ ಅನುದಾನ ನೀಡಿದ್ದು, ಜಿಪಂ ಸಿಇಒ ಸೂಚನೆ ಮೇರೆಗೆ ಟೆಂಡರ್ ಪೂರ್ವದಲ್ಲೇ ಕಾಮಗಾರಿ ಆರಂಭಿಸಿರಬಹುದು. ಗಂಗಸಂದ್ರ, ಮರಳೂರು ಕೆರೆ ಅಭಿವೃದ್ಧಿ ಟೆಂಡರ್ ಬಗ್ಗೆ ಮಾಹಿತಿ ಪಡೆಯುತ್ತೇನೆ. ಎನ್.ನಾಗರಾಜು ಅಧೀಕ್ಷಕ ಇಂಜಿನಿಯರ್, ಸಣ್ಣ ನೀರಾವರಿ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net