

ಹುಬ್ಬಳ್ಳಿ: ಇಲ್ಲಿಯ ವೀರಾಪೂರ ಒಣಿಯಲ್ಲಿರುವ ಮೃತ ಅಂಜಲಿ ಮನೆಗೆ ಗಣ್ಯರ ದಂಡು ಭಾನುವಾರ ಆಗಮಿಸಿ ಕುಟುಂಬದವರಿಗೆ ಧೈರ್ಯ ತುಂಬಿತು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ಎಂಎಲ್‌ಸಿ ಪ್ರದೀಪ ಶೆಟ್ಟರ್ ಸೇರಿದಂತೆ ಇತರ ನಾಯಕರು ಆಗಮಿಸಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿದ್ದರಲ್ಲದೇ ಕೆಲವರು ಕೈಲಾದಷ್ಟು ಧನಸಹಾಯ ಕೂಡ ಮಾಡಿದರು.
ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಹುಬ್ಬಳ್ಳಿಯಲ್ಲಿ ಮತ್ತೊಂದು ಅಹಿತಕರ ಘಟನೆ ನಡೆದಿದೆ. ಈ ಘಟನೆಗೆ ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವೇ ಕಾರಣ ಎಂದು ದೂರಿದರು.
ಪೋಲಿಸ ಇಲಾಖೆಯವರು, ಅಕ್ರಮ ಚಟುವಟಿಕೆ ಮಾಡುವವರೊಂದಿಗೆ ಶಾಮೀಲಾಗಿದ್ದಾರೆ. ಬೇಕಾದ ಸ್ಥಳಕ್ಕೆ ವರ್ಗಾವಣೆ ಮಾಡಿಸಿಕೊಳ್ಳಲು ರಾಜಕಾರಣಿಗಳಿಗೆ ಹಣ ನೀಡಿರುತ್ತಾರೆ. ಆ ಹಣವನ್ನು ವಾಪಸ್ ಸಂಗ್ರಹಿಸಲು ಅಪರಾಧ ಕೃತ್ಯ ಎಸಗುವವರೊಂದಿಗೆ ಪೋಲಿಸರು ಕೈಜೋಡಿಸುತ್ತಾರೆ ಎಂದು ಆರೋಪಿಸಿದರು.
ಅವಳಿನಗರದಲ್ಲಿ ಗಾಂಜಾ, ಮದ್ಯ ಸೇವತೆ ಪ್ರಕರಣಗಳು ಹೆಚ್ಚಾಗುತ್ತಿವೆ. ಅದನ್ನು ಮಟ್ಟ ಹಾಕಬೇಕು. ಅಕ್ರಮ ಚಟುವಟಿಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ರಾಜಕಾರಣಿಗಳ ಮಕ್ಕಳೇ ಪೋಲಿಸರೊಂದಿಗೆ ಶಾಮೀಲಾಗಿ ಸಮಾಜದಲ್ಲಿ ಅಹಿತಕರ ಘಟನೆಗಳು ನಡೆಯಲು ಕಾರಣರಾಗುತ್ತಿದ್ದಾರೆ ಎಂದರು.
ಕೆಳ ವರ್ಗದ ಪೋಲಿಸರ ಅಂತರಜಿಲ್ಲಾ ವರ್ಗಾವಣೆ ಕಾನೂನು ಜಾರಿಗೆ ತರಬೇಕು. ಹೀಗಾದಾಗ ಕಾನೂನು ಬಾಹಿರ ಚಟುವಟಿಕೆ ಮಟ್ಟ ಹಾಕಲು ಸಾಧ್ಯವಾಗುತ್ತದೆ ಎಂದರು.
ಚುನಾವಣೆ ಇದೀಗ ಮುಗಿದಿದೆ. ಸಿಎಂ ಸಿದ್ದರಾಮಯ್ಯ ಅವರು, ಜನರ ರಕ್ಷಣೆ ಮಾಡಲಿ. ಹಿಂದುಳಿದವರ, ಮಹಿಳೆಯರ ಪರ ಎನ್ನುವ ಅವರು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಂಜಲಿ ಕುಟುಂಬಸ್ಥರಿಗೆ ಸೋನಿಯಾಗಾಂಧಿ ನಗರದಲ್ಲಿ ನಿವೇಶನ ನೀಡಬೇಕು. ಇಲ್ಲವೇ ಮನೆ ನಿರ್ಮಿಸಿ ಕೊಡಬೇಕು. ಕುಟುಂಬಕ್ಕೆ ಭದ್ರತೆ ಒದಗಿಸಬೇಕು. ಸರ್ಕಾರ ಕಣ್ಣು ಒರೆಸುವ ತಂತ್ರ ಮಾಡಬಾರದು ಎಂದರು.
ಸ್ಥಳೀಯ ಶಾಸಕರು ತಡವಾಗಿ ಬಂದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಶಾಸಕರಿಗಿರುವ ಕಾಳಜಿ ತೋರಿಸುತ್ತದೆ. ಇಲ್ಲಿ ಯಾರೂ ಕೂಡ ಫೋಸ್ ಕೊಡಲು ಬರುವುದಿಲ್ಲ. ಸಂತ್ರಸ್ತರಿಗೆ ಸರ್ಕಾರದಿಂದ ಮನೆ, 50 ಲಕ್ಷ ರೂ. ಪರಿಹಾರ ಕೊಡಿಸಲು ಶಾಸಕರು ಕಾರ್ಯ ಪ್ರವೃತರಾಗಬೇಕು. ಅದೇ ಅಲ್ಪಸಂಖ್ಯಾತರಾಗಿದ್ದರೆ ಈಗಾಗಲೇ ಪರಿಹಾರ ಧನ ಘೋಷಣೆ ಮಾಡುತ್ತಿದ್ದರು. ಹಿಂದು ಹುಡುಗಿ ಎಂಬ ಕಾರಣಕ್ಕೆ ಪರಿಹಾರ ಧನ ಘೋಷಣೆ ಮಾಡಿಲ್ಲ. ನೀತಿ ಸಂಹಿತೆ ನೆಪವೊಡ್ಡಿ ಈ ರೀತಿ ಮಾಡುವುದು ಸಮಂಜಸವಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.