ನ್ಯಾಯಾಂಗದಲ್ಲೂ ಭ್ರಷ್ಟಾಚಾರ, ಮಂಗಳೂರು ವಿವಿ 45ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ

mng_25 sept VV
ಮಂಗಳೂರು ವಿವಿ 45ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರನ್ನು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಸನ್ಮಾನಿಸಿದರು. ಪರೀಕ್ಷಾಂಗ ಕುಲಸಚಿವ ದೇವೇಂದ್ರಪ್ಪ, ಕಾರ್ಯಕ್ರಮ ಸಂಯೋಜಕ ಪ್ರೊ.ಎ.ಎಂ.ಖಾನ್ ಇದ್ದರು.
Published on

ಮಂಗಳೂರು: ಪ್ರಸ್ತುತ ದೇಶದ ವ್ಯವಸ್ಥೆಯಲ್ಲಿ ನ್ಯಾಯಾಂಗದಲ್ಲೂ ಭ್ರಷ್ಟಾಚಾರ ಇದ್ದು, ಅಲ್ಲಿಗೆ ನಮ್ಮದೇ ಸಮಾಜದಿಂದ ಹೋಗುವವರು ಸಂವಿಧಾನದ ಆಶಯದಿಂದ ದೂರ ಇರುವುದು ವಿಪರ್ಯಾಸ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯದ ಮಂಗಳಾ ಸಭಾಂಗಣದಲ್ಲಿ ಬುಧವಾರ 45ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಶಾಸಕಾಂಗ, ಕಾಯಾರ್ಂಗ ಮತ್ತು ನ್ಯಾಯಾಂಗ ಪರಸ್ಪರ ಪೂರಕವಾಗಿ ಕೆಲಸ ಮಾಡಬೇಕು. ಆದರೆ ಈಗ ಶಾಸಕರ ನಿಯಂತ್ರಣದಲ್ಲಿ ಕಾಯಾರ್ಂಗ ಕೆಲಸ ಮಾಡಬೇಕಾಗುತ್ತದೆ. ಕೆಳ ಹಂತದ ಕೋರ್ಟ್‌ನಿಂದ ಸುಪ್ರೀಂ ಕೋರ್ಟ್ ವರೆಗೆ 10-15 ವರ್ಷ ವರೆಗೂ ವ್ಯಾಜ್ಯ ಇತ್ಯರ್ಥಕ್ಕೆ ಸಮಯ ತೆಗೆದುಕೊಳ್ಳುತ್ತದೆ. ನ್ಯಾಯದಾನ ವಿಳಂಬವಾಗಬಾರದು. ಅಮೆರಿಕದಂತೆ ಎರಡೇ ಹಂತದಲ್ಲಿ ನ್ಯಾಯ ತೀರ್ಮಾನ ಅಂತಿಮಗೊಳ್ಳಬೇಕು ಎಂದರು.

ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 45ವರ್ಷಗಳಲ್ಲಿ ವಿವಿಯ ಕೊಡುಗೆ ಮಹತ್ತರವಾದ್ದು. ಅಂತಹ ವಿವಿಯನ್ನು ಉಳಿಸಿಕೊಳ್ಳುವ ಕೆಲಸ ಆಗಬೇಕು. ಮುಂದಿನ ಭವಿಷ್ಯಕ್ಕಾಗಿ ಹಕ್ಕನ್ನು ಬದಿಗೆ ಸರಿಸಿ, ಕರ್ತವ್ಯದ ಬಗ್ಗೆ ಪ್ರತಿಜ್ಞೆ ಕೈಗೊಳ್ಳಬೇಕು ಎಂದರು.

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರನ್ನು ವಿವಿ ವತಿಯಿಂದ ಸನ್ಮಾನಿಸಲಾಯಿತು.

ಪರೀಕ್ಷಾಂಗ ಕುಲಸಚಿವ ದೇವೇಂದ್ರಪ್ಪ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಪ್ರೊ.ಎ.ಎಂ.ಖಾನ್ ವಂದಿಸಿದರು. ಶ್ರೀದೇವಿ ನಿರೂಪಿಸಿದರು.

-------------------

ಈಗಿನ ರಾಜಕಾರಣದಿಂದ ಬೇಸರ

ಸ್ವಾತಂತ್ರ್ಯ ದಿನಗಳ ರಾಜಕಾರಣಕ್ಕೂ ಈಗಿನ ರಾಜಕೀಯಕ್ಕೂ ಬಹಳ ವ್ಯತ್ಯಾಸ ಇದೆ. ಸ್ವಾತಂತ್ರ್ಯದ 75 ವರ್ಷಗಳ ಬಳಿಕ ಈಗಿನ ರಾಜಕಾರಣ ನೋಡಿ ಬೇಸರವಾಗುತ್ತಿದೆ. ನಾನು ನಿರಾಶಾವಾದಿಯಾಗಿದ್ದೇನೆ. ಹಿಂದೆ ಜನಪ್ರತಿನಿಧಿಗಳಿಗೆ ಚುನಾಯಿತ ಆಡಳಿತದಲ್ಲಿ ಸಭಾ ಭತ್ಯೆ ಎಂಬುದು ಇರುತ್ತಿರಲಿಲ್ಲ. ಈಗ ಅಧಿವೇಶನ ಪೂರ್ತಿ ಹಾಜರಾಗದಿದ್ದಾಗ ಭತ್ಯೆ ಸಿಗದಿದ್ದರೂ ಸಂಬಳ ನಡೆಯುತ್ತಲೇ ಇರುತ್ತದೆ. ಎರಡು ಬಾರಿ ಆಯ್ಕೆಯಾದರೆ ನಿವೃತ್ತಿ ವೇತನದ ಮೊತ್ತವೂ ದುಪ್ಪಟ್ಟಾಗುತ್ತದೆ. ಆಡಳಿತ-ವಿಪಕ್ಷಗಳ ವಿಚಾರದಲ್ಲಿ ಸಭಾತ್ಯಾಗ ನಡೆದಾಗಲೇ ಪ್ರಮುಖ ಮಸೂದೆಗಳು ಚರ್ಚೆ ಇಲ್ಲದೆಯೇ ಅಂಗೀಕಾರಗೊಳ್ಳುತ್ತವೆ. ಇದು ಜನತೆಗೆ ಯಾವ ಸಂದೇಶ ರವಾನಿಸುತ್ತದೆ ಎಂಬುದನ್ನು ಯೋಚಿಸಬೇಕಾಗಿದೆ. ಭ್ರಷ್ಟಾಚಾರ ಇದೇ ರೀತಿ ಮುಂದುವರಿದರೆ ದೇಶದಲ್ಲಿ ಕ್ರಾಂತಿ ಉಂಟಾಗಿ ದೇಶ ತುಂಡಾಗುವ ಭೀತಿ ಇದೆ. ಆಗ ನ್ಯಾಯತೀರ್ಮಾನಕ್ಕೆ ಸುಪ್ರೀಂ ಕೋರ್ಟ್ ಕೂಡ ಇಲ್ಲದ ಪರಿಸ್ಥಿತಿ ತಲೆದೋರಬಹುದು. ದೇಶ ರಣಾಂಗಣವಾಗಲಿದೆ. ದೇಶದ ಭವಿಷ್ಯದ ಬಗ್ಗೆ ಗಂಭೀರವಾಗಿ ಯೋಚಿಸಿ ಈಗಿಂದಲೇ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ರೂಢಿಸಿಕೊಳ್ಳುವ ಅಗತ್ಯತೆ ಇದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.

--------------------

ವಿವಿಯ ಕೆಲಸ ಕಾರ್ಯಗಳು ಪಾರದರ್ಶಕವಾಗಿ ಜನತೆಗೆ ಸಿಗುವಂತಾಗಬೇಕು. ಆರ್‌ಟಿಐ ಅರ್ಜಿಗಳು ಕೊನೆಯಾಗಬೇಕು. ನೇಮಕಾತಿಯಲ್ಲೂ ಪಾರದರ್ಶನಕತೆ ಕಾಯ್ದುಕೊಳ್ಳಬೇಕಾಗಿದೆ. ದುಂದುವೆಚ್ಚಕ್ಕೆ ಯಾವುದೇ ಅವಕಾಶ ನೀಡುವುದಿಲ್ಲ. ವಿವಿಯನ್ನು ಸಮಾಜಮುಖಿಯಾಗಿ ರೂಪಿಸಲು ಚಿಂತಿಸಲಾಗುತ್ತಿದೆ.

ಪ್ರೊ.ಪಿ.ಎಲ್.ಧರ್ಮ, ವಿವಿ ಕುಲಪತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net