ಜೆಜೆಎಂ ಯೋಜನೆಯಲ್ಲಿ ಭ್ರಷ್ಟಾಚಾರ

Ism_Jal-Jeevan-mission
Published on

ವಿಜಯವಾಣಿ ಸುದ್ದಿಜಾಲ, ಪುತ್ತೂರು ಗ್ರಾಮಾಂತರ

ಜಲಜೀವನ್ ಮಿಷನ್(ಜೆಜೆಎಂ) ಯೋಜನೆಯ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಅಸರ್ಮಕ ಕಾಮಗಾರಿ ನಡೆಸಿ ಅರ್ಧದಲ್ಲೇ ಬಿಟ್ಟು ಹೋಗಿರುವ ಇಂಜಿನಿಯರ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ನಿಡ್ಪಳ್ಳಿ ಗ್ರಾಪಂ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದರು.

ಗ್ರಾಮಸಭೆ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ಅಧ್ಯಕ್ಷತೆಯಲ್ಲಿ ನಡೆಯಿತು. ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ರೇಖಾ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥ ಪ್ರಕಾಶ್ ಬೋರ್ಕರ್, ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಗ್ರಾಮಸಭೆಗೆ ಜಿಪಂ ಇಂಜಿನಿಯರ್ ಬಂದಿಲ್ಲ. ಅವರು ಬಾರದೆ ಸಭೆ ಮುಗಿಸಬಾರದು. ಅವರನ್ನು ಕೆಲಸದಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸತ್ಯನಾರಾಯಣ ರೈ, ಹರೀಶ್‌ಕುಮಾರ್, ನಾರಾಯಣ ನಾಯ್ಕ ಮತ್ತಿತರರು ಯೋಜನೆಯವರು ಕೇವಲ ನಲ್ಲಿ ಅಳವಡಿಸಿ ಹೋಗಿದ್ದಾರೆಯೇ ಹೊರತು ನೀರು ಬರುತ್ತಿಲ್ಲ. ನಲ್ಲಿಯನ್ನು ಕೂಡ ಮನೆಯ ಹತ್ತಿರ ಅಳವಡಿಸದೆ ಎಲ್ಲೆಲ್ಲೋ ಅಳವಡಿಸಲಾಗಿದೆ. ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಕಳೆದ ಗ್ರಾಮಸಭೆಗೂ ಇಂಜಿನಿಯರ್ ಬಂದಿಲ್ಲ. ಈ ಸಭೆಗೂ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಗ್ರಾ.ಪಂ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್, ಗ್ರಾಮಸಭೆಗೆ ಬಂದು ಅಗತ್ಯ ಮಾಹಿತಿ ನೀಡಬೇಕೆಂದು ಇಂಜಿನಿಯರ್‌ಗೆ ನಾವು ಹೇಳಿದ್ದೆವು. ಆದರೂ ಬಂದಿಲ್ಲ. ಕಾಮಗಾರಿ ಪೂರ್ಣಗೊಳಿಸದೆ ಬಿಲ್ಲು ಪಾವತಿ ಮಾಡದಂತೆ ಸಂಬಂಧಿಸಿದ ಇಲಾಖೆಗೆ ಬರೆಯೋಣ ಎಂದರು. ಯೋಜನೆಯ ಇಂಜಿನಿಯರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಬರೆದುಕೊಳ್ಳುವ ನಿರ್ಣಯ ಕೈಗೊಳ್ಳಲಾಯಿತು.

ಉಪವಲಯ ಅರಣ್ಯಾಧಿಕಾರಿ ಮದನ್ ಬಿ.ಕೆ, ಮೆಸ್ಕಾಂ ಇಂಜಿನಿಯರ್ ಪುತ್ತು ಜೆ, ಸಂಪ್ಯ ಪೊಲೀಸ್ ಠಾಣೆಯ ಎಎಸ್‌ಐ ಮಹಮ್ಮದಾಲಿ, ಆರೋಗ್ಯ ಕಾರ್ಯಕರ್ತೆ ಎ.ವಿ.ಕುಸುಮಾವತಿ, ಪಶುವೈದ್ಯ ಪರೀಕ್ಷಕ ವೀರಪ್ಪ, ಶಿಕ್ಷಣ ಇಲಾಖೆಯ ಪರಮೇಶ್ವರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಸ್.ಸುಜಾತ, ಸಮಾಜ ಕಲ್ಯಾಣ ಇಲಾಖೆಯ ಲಕ್ಷ್ಮೀದೇವಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪವಿತ್ರಾ ನಂದ್ರಾಳ ಮತ್ತಿತರ ಅಧಿಕಾರಿಗಳು ಮಾಹಿತಿ ನೀಡಿದರು.

ಪಿಡಿಒ ಸಂಧ್ಯಾಲಕ್ಷ್ಮೀ, ಉಪಾಧ್ಯಕ್ಷೆ ಸೀತಾ, ಸದಸ್ಯರಾದ ಬಾಲಚಂದ್ರ ನಾಯ್ಕ, ಸತೀಶ್ ಶೆಟ್ಟಿ, ನಂದಿನಿ ಆರ್.ರೈ, ಗೀತಾ ಡಿ, ಗ್ರೇಟಾ ಡಿಸೋಜ, ತುಳಸಿ ಉಪಸ್ಥಿತರಿದ್ದರು.

ನೀರು ಪೂರೈಕೆಗೆ ಬದಲಿ ವ್ಯವಸ್ಥೆ

ಪರಿಶಿಷ್ಟ ಪಂಗಡದ ಮನೆಗಳೇ ಹೆಚ್ಚು ಇರುವ ನೀರುಕ್ಕು ಪ್ರದೇಶದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿಲ್ಲ ಎಂದು ಗ್ರಾಮಸ್ಥ ಕೆ.ಎನ್.ಪಾಟಾಳಿ ತಿಳಿಸಿದರು. ಅಲ್ಲಿ ನೀರಿನ ಲಭ್ಯತೆ ಕಡಿಮೆ ಇದ್ದು, ಅನುದಾನವಿರಿಸಿ ಬದಲಿ ವ್ಯವಸ್ಥೆ ಮಾಡಬೇಕಾಗಿದೆ. ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾ.ಪಂ ಅಧ್ಯಕ್ಷರು ಭರವಸೆ ನೀಡಿದರು.

ಅರ್ಧದಲ್ಲೇ ಬಾಕಿಯಾದ ಅಂಬೇಡ್ಕರ್ ಭವನ

ನಿಡ್ಪಳ್ಳಿ ಗ್ರಾಮದ ನಾಕುಡೇಲು ಎಂಬಲ್ಲಿ ನಿರ್ಮಿಸಲುದ್ದೇಶಿಸಿರುವ ಅಂಬೇಡ್ಕರ್ ಭವನ ಕಾಮಗಾರಿ ಅರ್ಧದಲ್ಲೇ ಸ್ಥಗಿತಗೊಂಡಿದೆ. ಮಾಡಿರುವ ಕಾಮಗಾರಿಯೂ ಕಳಪೆಯಾಗಿದೆ. ಇದು ಅಂಬೇಡ್ಕರ್ ಅವರಿಗೆ ಮಾಡಿರುವ ಅಪಮಾನವಾಗಿದ್ದು, ಯಾವ ಜನಪ್ರತಿನಿಧಿಗಳೂ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ ಎಂದ ಗ್ರಾಮಸ್ಥ ಕೃಷ್ಣ ಕಾಮಗಾರಿ ಅರ್ಧದಲ್ಲೇ ಸ್ಥಗಿತಗೊಳ್ಳಲು ಕಾರಣವೇನು? ಎಂದು ಪ್ರಶ್ನಿಸಿದರು. ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಈ ಬಗ್ಗೆ ಇಲಾಖೆಗೆ ತಿಳಿಸುವುದಾಗಿ ಸಮಾಜ ಕಲ್ಯಾಣ ಇಲಾಖಾಧಿಕಾರಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net