ಜಮೀನಿನ ಪರಿಹಾರ ವಿತರಣೆಯಲ್ಲಿ ಭ್ರಷ್ಟಾಚಾರ

Land, Compensation, Distribution, Corruption,
Published on

ಮೊಳಕಾಲ್ಮೂರು: ಭದ್ರಾ ಮೇಲ್ದಂಡೆ ಯೋಜನೆಗೆ ಸ್ವಾಧೀನಪಡಿಸಿಕೊಂಡ ಜಮೀನುಗಳ ಮಾಲೀಕರಿಗೆ ಪರಿಹಾರ ಕೊಡುವಲ್ಲಿ ಅಧಿಕಾರಿಗಳು ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿ ತಾಲೂಕು ರೈತ ಸಂಘದ ಪದಾಧಿಕಾರಿಗಳು ತಾಲೂಕು ಆಡಳಿತಸೌಧದ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಬಯಲುಸೀಮೆ ಚಿತ್ರದುರ್ಗ ಜಿಲ್ಲೆ ಹಸಿರಾಗಲು ಭದ್ರಾ ಮೇಲ್ದಂಡೆ ಯೋಜನೆ ಅವಶ್ಯಕವಾಗಿದೆ. ಆದರೆ, ಸರ್ಕಾರಗಳ ರಾಜಕೀಯ ಕೆಸರೆರಚಾಟ ಮತ್ತು ನಿರ್ಲಕ್ಷೃ ಧೋರಣೆಯಿಂದ ಯೋಜನೆ ಆಮೆಗತಿಯಲ್ಲಿ ಸಾಗುತ್ತಿದೆ. ಆಡಳಿತರೂಢ ಕಾಂಗ್ರೆಸ್ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಯನ್ನು ಬಜೆಟ್‌ನಲ್ಲಿ ಕಡೆಗಣಿಸಿ ಅನ್ಯಾಯ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚಿತ್ರದುರ್ಗದ ಇಂಜಿನಿಯರ್ ಕಚೇರಿಯ ಮುಖ್ಯ ಇಂಜಿನಿಯರ್ ಹುದ್ದೆ ಮೂರ‌್ನಾಲ್ಕು ತಿಂಗಳಿಂದ ಖಾಲಿ ಇದ್ದರೂ ಭರ್ತಿಯಾಗುತ್ತಿಲ್ಲ. ಕಾಲುವೆಗಾಗಿ ಸ್ವಾಧೀನ ಮಾಡಿಕೊಂಡ ಜಮೀನುಗಳಿಗೆ ಪರಿಹಾರ ಕೊಡುವಲ್ಲೂ ತಾರತಮ್ಯ ನೀತಿ ಅನುಸರಿಸುತ್ತಿದೆ. ಹೆಚ್ಚು ಹಣ ನೀಡಿದವರಿಗೆ ಮೊದಲು ಪರಿಹಾರ ನೀಡುವ ಸಂಗತಿ ಮೇಲ್ನೋಟಕ್ಕೆ ಕಂಡುಬಂದಿದೆ. ಇದು ಅನ್ಯಾಯ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಒಳಪಡಿಸಬೇಕು. ಮೊಳಕಾಲ್ಮೂರು- ಚಳ್ಳಕೆರೆ ತಾಲೂಕಿನ ರೈತಾಪಿ ವರ್ಗದ ಹಿತ ಕಾಪಾಡಲು ಸರ್ಕಾರ ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಉಪ ತಹಸೀಲ್ದಾರ್ ಏಳುಕೋಟಿ ಅವರಿಗೆ ಮನವಿ ಸಲ್ಲಿಸಿದರು. ರೈತ ಸಂಘದ ತಾಲೂಕು ಅಧ್ಯಕ್ಷ ರವಿಕುಮಾರ, ಪ್ರಧಾನ ಕಾರ್ಯದರ್ಶಿ ಮಂಜಣ್ಣ, ಎಚ್.ಟಿ.ಚಂದ್ರಣ್ಣ, ನಿಂಗಣ್ಣ, ಕೃಷ್ಣಮೂರ್ತಿ, ಕನಕ ಶಿವಮೂರ್ತಿ, ಈರಣ್ಣ, ನಾಗರಾಜ್, ಮುತ್ತಯ್ಯ, ದೊಡ್ಡಣ್ಣ, ಬೊಮ್ಮಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net