ಭ್ರಷ್ಟಾಚಾರ ರಹಿತ ವ್ಯವಸ್ಥೆ ನನ್ನ ಧ್ಯೇಯ

Corruption-free system my mission Belgaum
ಬೆಳಗಾವಿ ಶಾಹು ನಗರದಲ್ಲಿ ಹಮ್ಮಿಕೊಂಡಿದ್ದ ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ, ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ, ಮಹಾರಾಷ್ಟ್ರ ಶಿಕ್ಷಣ ಸಚಿವ ಗಿರೀಶ ಮಹಾಜನ, ಬೆಳಗಾವಿ ಉಪಮೇಯರ್ ರೇಷ್ಮಾ ಪಾಟೀಲ, ಪಾಲಿಕೆ ಸದಸ್ಯ ಶ್ರೇಯಸ್ ನಾಕಾಡಿ ಇತರರಿದ್ದರು.
Published on

ಬೆಳಗಾವಿ: ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ರವಿ ಬಿ. ಪಾಟೀಲ ಅವರು ಬಹಿರಂಗ ಪ್ರಚಾರದ ಅಂತಿಮ ದಿನವಾದ ಸೋಮವಾರ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದರು.

ಪ್ರಚಾರ ಕಾರ್ಯಕ್ಕೆ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ, ಮಹಾರಾಷ್ಟ್ರ ಶಿಕ್ಷಣ ಸಚಿವ ಗಿರೀಶ ಮಹಾಜನ ಅವರು ಡಾ. ರವಿ ಪಾಟೀಲ ಪರ ಭರ್ಜರಿ ಪ್ರಚಾರ ಕೈಗೊಂಡರು. ಶಾಹು ನಗರದಲ್ಲಿ ಬೃಹತ್ ಬಹಿರಂಗ ಪ್ರಚಾರದಲ್ಲಿ ಪಾಲ್ಗೊಂಡ ನಾಯಕರು, ದೇಶದ ಭದ್ರತೆ, ರಕ್ಷಣೆ, ನಾಡಿನ ಜನರ ಸಂಸ್ಕೃತಿ ಉಳಿವಿಗಾಗಿ ಬಿಜೆಪಿ ನೇತೃತ್ವದ ಸರ್ಕಾರ ಚುಕ್ಕಾಣಿ ಹಿಡಿಯಬೇಕಿದೆ ಎಂದರು.

ಡಾ. ರವಿ ಪಾಟೀಲ ಮಾತನಾಡಿ, ಶಾಸಕನಾದರೆ ಭ್ರಷ್ಟಾಚಾರ ರಹಿತ ವ್ಯವಸ್ಥೆ ಹಾಗೂ ಸರ್ಕಾರದಿಂದ ಬರುವ ಅನುದಾನದ ಸಮರ್ಪಕ ಬಳಕೆಗೆ ಶ್ರಮಿಸುವೆ. ಈ ಮೂಲಕ ಬೆಳಗಾವಿ ನಗರದ ಸಮಗ್ರ ಅಭಿವೃದ್ಧಿ, ಸರ್ಕಾರಿ ಸೌಲಭ್ಯ ಸಾಮಾನ್ಯನಿಗೂ ಕೈಗೆಟಕುವ ರೀತಿಯಲ್ಲಿ ಕಲಸ ನಿರ್ವಹಿಸುತ್ತೇನೆ ಎಂದರು. ಸರ್ಕಾರಿ ಶಾಲೆಗಳ ಅಭಿವೃದ್ಧಿ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆಗಳು ಜನಸಾಮಾನ್ಯರಿಗೆ ದಕ್ಕುವಂತೆ ಮಾಡುತ್ತೇನೆ. ಬೆಳಗಾವಿ ನಗರವನ್ನು ಭ್ರಷ್ಟಾಚಾರ ಮುಕ್ತವಾಗಿಸಲು ಶ್ರಮಿಸುತ್ತೇನೆ ಎಂದರು.

ಉದ್ಯೋಗಗಳು ಸೃಷ್ಟಿಯಾದರೆ ಮಾತ್ರ ದುಡಿಯುವ ಕೈಗಳಿಗೆ ಅವಕಾಶಗಳು ದೊರಕುತ್ತವೆ. ಈ ನಿಟ್ಟಿನಲ್ಲಿ ನಗರದ ಮೂಲ ಸೌಕರ್ಯ ವೃದ್ಧಿಸುವುದರ ಜತೆಗೆ ಯುವಕರಿಗೆ ಉದ್ಯೋಗಾವಕಾಶ ಹೆಚ್ಚಿಸಲು ನನ್ನನ್ನು ನಾನು ಸಮರ್ಪಿಸಿಕೊಳ್ಳುತ್ತೇನೆ ಎಂದು ತಿಳಿಸಿದರು. ಬೆಳಗಾವಿ ಉಪಮೇಯರ್ ರೇಷ್ಮಾ ಪಾಟೀಲ, ಪಾಲಿಕೆ ಸದಸ್ಯ ಶ್ರೇಯಸ್ ನಾಕಾಡಿ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net