ಕೇಂದ್ರದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ: ವಿಜಯೇಂದ್ರ

vijendra
ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
Published on

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಸಂದರ್ಭದಲ್ಲೇ ಮೂರನೇ ಅವಧಿಯ ಎನ್‌ಡಿಎ ಸರ್ಕಾರ 100 ದಿನ ಪೂರ್ಣಗೊಳಿಸುತ್ತಿರುವುದು ಸಂತಸದ ಸಂಗತಿ. ಪ್ರಧಾನ ಸೇವಕನಾಗಿ ಮೋದಿ ಅವರು ಕಳೆದ 10 ವರ್ಷಗಳಲ್ಲಿ ಅತ್ಯುತ್ತಮ ಆಡಳಿತ ನೀಡಿದ್ದಾರೆ. ವಿಕಸಿತ ಭಾರತ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದರು.

ಯುಪಿಎ ಸರ್ಕಾರದ ಅವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿತ್ತು. ಆದರೆ ಮೋದಿ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರರಹಿತ ಆಡಳಿತ ನೀಡುತ್ತಿರುವುದು ಹೆಗ್ಗಳಿಕೆ. 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಬೇಕು ಎಂಬ ನಿಟ್ಟಿನಲ್ಲಿ ಮೋದಿ ಕಾರ್ಯೋನ್ಮುಖರಾಗಿದ್ದಾರೆ ಎಂದರು.
ಕಳೆದ 100 ದಿನಗಳ ಅವಧಿಯಲ್ಲಿ ಮೂಲ ಸೌಕರ್ಯ, ರೈತರ ಕಲ್ಯಾಣ, ಮಹಿಳಾ ಹಾಗೂ ಯುವ ಸಬಲೀಕರಣಕ್ಕಾಗಿ ಸುಮಾರು 15 ಸಾವಿರ ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಖರ್ಚು ಮಾಡಿದೆ. ಎನ್‌ಡಿಎ ಸರ್ಕಾರ ರೈತರಿಗೆ ಕಿಸಾನ್ ಸಮ್ಮಾನ್, ಬೆಂಬಲ ಬೆಲೆ ನೀಡಿ ಅವರನ್ನು ಸಬಲೀಕರಣಗೊಳಿಸಿದೆ ಎಂದು ತಿಳಿಸಿದರು.
ನಗರ, ಪಟ್ಟಣ ಪ್ರದೇಶಗಳಲ್ಲಿ ಒಂದು ಕೋಟಿ, ಗ್ರಾಮೀಣ ಭಾಗದಲ್ಲಿ ಎರಡು ಕೋಟಿಗಳ ಮನೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಸೂರ್ಯ ಘರ್ ಯೋಜನೆ ಮೂಲಕ ಸೌರಶಕ್ತಿ ಬಳಕೆಗೆ ಒತ್ತು ನೀಡಿದೆ. 70 ವರ್ಷ ಮೇಲ್ಪಟ್ಟವರಿಗೂ ಕಿಸಾನ್ ಸಮ್ಮಾನ್ ಯೋಜನೆ ವಿಸ್ತರಿಸಿರುವುದರಿಂದ ಕೋಟ್ಯಂತರ ಮಂದಿಗೆ ಉಚಿತ ಆರೋಗ್ಯ ಸೇವೆ ದೊರೆಯುವಂತಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ, ಡಿ.ಎಸ್.ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಧಾನ ಕಾರ್ಯದರ್ಶಿಗಳಾದ ಮಾಲತೇಶ್, ಶಿವರಾಜ್, ಪ್ರಮುಖರಾದ ಕೆ.ವಿ.ಅಣ್ಣಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net