ತಾಜಪುರ (ಎಚ್) ಗ್ರಾಪಂನಲ್ಲಿ ಭ್ರಷ್ಟಾಚಾರ ಪ್ರಕರಣ, ದೂರುದಾರನಿಗೆ ಜೀವ ಬೆದರಿಕೆ, ಪ್ರಾಣ ರಕ್ಷಣೆಗಾಗಿ ಎಸ್‌ಪಿಗೆ ಮೊರೆ

TAJAPUR GP
ತಿಕೋಟಾ ತಾಲೂಕಿನ ತಾಜಪೂರ (ಎಚ್) ಗ್ರಾಮ ಪಂಚಾಯಿತಿ
Published on

ವಿಜಯಪುರ: ಗ್ರಾಮ ಪಂಚಾಯಿತಿಯಲ್ಲಿ ಲಕ್ಷಾಂತರ ರೂಪಾಯಿ ಭ್ರಷ್ಟಾಚಾರ ಎಸಗಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂಬ ಬೇಡಿಕೆ ಇರಿಸಿದ ದೂರುದಾರನಿಗೆ ಪೊಲೀಸ್ ಠಾಣೆ ಆವರಣದಲ್ಲಿಯೇ ಜೀವ ಬೆದರಿಕೆ ಹಾಕಲಾಗಿದೆ.

ತಿಕೋಟಾ ತಾಲೂಕಿನ ತಾಜಪುರ ಗ್ರಾಮ ಪಂಚಾಯಿತಿಯ ಹಗರಣ ಬಯಲಿಗೆಳೆದ ದೂರುದಾರ ಈರಯ್ಯ ಮಠಪತಿಗೆ ಜೀವ ಬೆದರಿಕೆ ಹಾಕಿದ್ದು, ಆತಂಕಗೊಂಡ ಈರಯ್ಯ ರಕ್ಷಣೆ ಕೋರಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಮೊರೆ ಹೋಗಿದ್ದಾರೆ. ಈ ಬಗ್ಗೆ ಸೋಮವಾರ ಎಸ್‌ಪಿ ಋಷಿಕೇಶ ಸೋನಾವಣೆ ಇವರಿಗೆ ಮನವಿ ಸಲ್ಲಿಸಿರುವ ಈರಯ್ಯ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವುದರ ಜೊತೆಗೆ ಜೀವ ರಕ್ಷಣೆ ಒದಗಿಸಬೇಕೆಂದು ಮನವಿ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ

ತಿಕೋಟಾ ತಾಲೂಕಿನ ತಾಜಪೂರ (ಎಚ್) ಗ್ರಾಮ ಪಂಚಾಯಿತಿಯಲ್ಲಿ 2015-16ನೇ ಸಾಲಿನಿಂದ 2018-19ರವರೆಗೆ ವಿವಿಧ ಯೋಜನೆಗಳಡಿ ಒಟ್ಟು 87,86, 018 ರೂಪಾಯಿ ಅವ್ಯವಹಾರ ನಡೆದಿದೆ. ಈಗಾಗಲೇ ಪಿಡಿಒ ರಾಜಶ್ರೀ ತುಂಗಳ ಇವರನ್ನು ಅಮಾನತುಗೊಳಿಸಲಾಗಿತ್ತು. ಇದೀಗ ರಾಜಶ್ರೀ ಮತ್ತೆ ಸೇವೆಗೆ ಹಾಜರಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಈ ಮಧ್ಯೆ ಸದಸ್ಯರ ಮೇಲೆ ಕ್ರಮಕ್ಕಾಗಿ ಸಿಇಒ ರಿಷಿ ಆನಂದ ಅವರು ಪ್ರಾದೇಶಿಕ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಕುರಿತು ಸೆ.7ರಂದು ‘ವಿಜಯವಾಣಿ’ ದಿನಪತ್ರಿಕೆಯಲ್ಲಿ ‘ಹಗರಣ ಸಾಬೀತಾದರೂ ಕ್ರಮಕ್ಕೆ ಹಿಂದೇಟು’ ಎಂಬ ತಲೆ ಬರಹದಡಿ ವರದಿ ಪ್ರಕಟಗೊಂಡಿತ್ತು. ವರದಿ ಬೆನ್ನಲ್ಲೇ ಆಕ್ರೋಶಗೊಂಡ ಕೆಲವರು ಜೀವ ಬೆದರಿಕೆ ಹಾಕಿದ್ದಾರೆಂದು ಮಠಪತಿ ತಿಳಿಸಿದ್ದಾರೆ.

ಪೊಲೀಸ್ ಠಾಣೆ ಆವರಣದಲ್ಲೇ ಘಟನೆ

ತಿಕೋಟಾ ಪಿಎಸ್‌ಐ ಈರಯ್ಯ ಮಠಪತಿ ಕರೆ ಮಾಡಿ ಠಾಣೆಗೆ ಬರುವಂತೆ ತಿಳಿಸಿದ್ದಾರೆ. ಪಿಎಸ್‌ಐ ಅವರ ಮಾತಿಗೆ ಗೌರವ ಕೊಟ್ಟು ಈರಯ್ಯ ಠಾಣೆಗೆ ಹೋಗಿದ್ದಾರೆ. ಅಲ್ಲಿ ಭ್ರಷ್ಟಾಚಾರ ಪ್ರಕರಣ ಎದುರಿಸುತ್ತಿರುವ ದಾಮುಪಂಥ ಕೃ. ಚವಾಣ್, ಶ್ರೀಶೈಲ ಸ.ಹಾಲಳ್ಳಿ, ಗೌಸಪೀರ ಬಾ.ಮೊಕಾಶಿ, ಉಮೇಶ ಸಿ.ಯರನಾಳ, ಗುರಪ್ಪ ಸ.ಮುಚ್ಚಂಡಿ, ಪರಮೇಶ್ವರ ಭಿ.ಕಲಬೀಳಗಿ, ಅನೀಲಕುಮಾರ ಹಿರೇಮಠ ಇವರೆಲ್ಲರಿದ್ದರು. ಆಗ ಪಿಎಸ್‌ಐ ಅವರು ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಗೆ ಸಂಬಂಧಿಸಿದಂತೆ ವಿಚಾರಿಸಿದರು. ಅವರಿಗೆ ಸವಿವರವಾಗಿ ಮಾಹಿತಿ ನೀಡಿ ಠಾಣೆ ಹೊರ ಬಂದು ಬಾಗಿಲ ಬಳಿ ನಿಂತಾಗ ಆ ಏಳು ಜನ ಸೇರಿ ಹಲ್ಲೆ ಮಾಡಿದ್ದಾರಲ್ಲದೇ ಜೀವ ಬೆದರಿಕೆ ಒಡ್ಡಿದ್ದಾರೆ. ಈ ಬಗ್ಗೆ ಪಿಎಸ್‌ಐ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ದೂರು ಸಹ ದಾಖಲಿಸಿಕೊಳ್ಳಲಿಲ್ಲ. ಹೀಗಾಗಿ ಜೀವ ಭಯದಲ್ಲಿರುವ ನನಗೆ ರಕ್ಷಣೆ ಕೊಡಬೇಕಲ್ಲದೇ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮಠಪತಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net