ಅಕ್ರಮ-ಸಕ್ರಮ ಅರ್ಜಿ ವಿಲೇವಾರಿಗೆ ಲಂಚ ಸ್ವೀಕಾರ ಆರೋಪ ಸಾಬೀತು

mng--2 March Mahesh
Published on

ಮಂಗಳೂರು: ಗ್ರಾಮಕರಣಿಕನೊಬ್ಬ ಅಕ್ರಮ-ಸಕ್ರಮ ಅರ್ಜಿ ವಿಲೇವಾರಿಗೆ ಲಂಚದ ಬೇಡಿಕೆಯಿಟ್ಟ ಆರೋಪ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ನ್ಯಾಯಾಲಯ ಅಪರಾಧಿಗೆ 4ವರ್ಷಗಳ ಸಾದಾ ಸಜೆ ಹಾಗೂ 70ಸಾವಿರ ರೂ. ದಂಡ ವಿಧಿಸಿದೆ.

ಸುಳ್ಯ ಮಂಡೆಕೋಲು ಗ್ರಾಮದ ಎಸ್.ಮಹೇಶ್ ಶಿಕ್ಷೆಗೊಳಗಾದ ಅಪರಾಧಿ.

ಪ್ರಕರಣ ವಿವರ: ಗೋಪಾಲಕೃಷ್ಣ ಮಂಡೆಕೋಲು ಸುಳ್ಯ ಅವರ ಅಕ್ರಮ-ಸಕ್ರಮದ ಅರ್ಜಿಯ ವಿಲೇವಾರಿಗೆ ಮಹೇಶ್ 60ಸಾವಿರ ರೂ. ಲಂಚದ ಹಣದ ಬೇಡಿಕೆಯೊಡ್ಡಿದ್ದ. 2016ರ ಜೂ.7ರಂದು 45ಸಾವಿರ ರೂ. ಹಣವನ್ನು ಲಂಚದ ಹಣವಾಗಿ ಸ್ವೀಕರಿಸುವ ಸಮಯ ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಠಾಣಾ ಸಿಬ್ಬಂದಿ ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣ ವಿಚಾರಣೆಯನ್ನು 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಮಂಗಳೂರು ಇದರ ನ್ಯಾಯಾಧೀಶ ಬಿ.ಬಿ. ಜಕಾತಿ ಅವರು ವಿಚಾರಣೆ ನಡೆಸಿ ಗುರುವಾರ ಅಂತಿಮ ತೀರ್ಪು ನೀಡಿದ್ದಾರೆ. ತೀರ್ಪಿನಲ್ಲಿ ಅಪರಾಧಿ ಮಹೇಶ್‌ಗೆ 4 ವರ್ಷಗಳ ಸಾದಾ ಸಜೆ ಹಾಗೂ 70 ಸಾವಿರ ರೂ. ದಂಡ ವಿಧಿಸಲಾಗಿದೆ. ಆರೋಪಿಯು ದಂಡ ಕಟ್ಟಲು ವಿಲನಾದಲ್ಲಿ ಮತ್ತೆ 8ತಿಂಗಳ ಕಾಲ ಸಾದಾ ಸಜೆಗೆ ಆದೇಶಿಸಿ ಅಂತಿಮ ತೀರ್ಪು ಹೊರಡಿಸಲಾಗಿದೆ.

ಪೊಲೀಸ್ ನಿರೀಕ್ಷಕ ದಿನಕರ ಶೆಟ್ಟಿ ತನಿಖೆ ಆರಂಭಿಸಿ, ಬಳಿಕ ಯೋಗೀಶ್ ಕುಮಾರ್ ತನಿಖೆ ಮುಂದುವರಿಸಿ, ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಕರ್ನಾಟಕ ಲೋಕಾಯುಕ್ತ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಿಪ್ಪಾಡಿ ಸರ್ಕಾರದ ಪರವಾಗಿ ವಾದ ಮಂಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net