

ಚಿತ್ರದುರ್ಗ: ಕ್ಯಾಸ್ಟ್, ಕಮಿಷನ್, ಕರಪ್ಷನ್ ಮೂಲಕ ದೇಶವನ್ನು ಈ ಹಿಂದೆ ಹಾಳು ಮಾಡಿದ್ದೇ ಕಾಂಗ್ರೆಸ್ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವಾಗ್ದಾಳಿ ನಡೆಸಿದರು.
ಮುರುಘಾಮಠದ ಅನುಭವಮಂಟಪದಲ್ಲಿ ಗುರುವಾರ ಬಿಜೆಪಿ ಹಮ್ಮಿಕೊಂಡಿದ್ದ ಎಸ್ಸಿ, ಎಸ್ಟಿ, ಒಬಿಸಿ ಕಾರ್ಯಕರ್ತರ ಸಮಾವೇಶವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ರಾಜಕಾರಣದಲ್ಲಿ ನೇರವಾದ ಸವಾಲು ಎದುರಿಸಲು ಬಿಜೆಪಿ ಸದಾ ಸಿದ್ಧವಿದೆ. ಆದರೆ, ಕಾಂಗ್ರೆಸ್‌ನವರಂತೆ ಕೆಟ್ಟ ರಾಜಕೀಯ ಮಾಡುವುದಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಬಿಜೆಪಿ ಬೆಂಬಲಿಸುವ ಜನರಿದ್ದಾರೆ. ಜನಪರ ಆಡಳಿತ ಮೆಚ್ಚಿದ್ದಾರೆ. ಹೀಗಾಗಿ ಕಮಲ ಅರಳುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆಸ್ಟ್ರೇಲಿಯಾ, ಅಮೆರಿಕಾ, ಯುರೋಪ್ ರಾಷ್ಟ್ರಗಳಲ್ಲಿ ಸಮರ್ಪಕವಾಗಿ ಕರೊನಾ ಲಸಿಕೆ ನೀಡಲು ಅಲ್ಲಿನ ಆಡಳಿತ ವರ್ಗಕ್ಕೆ ಇಂದಿಗೂ ಸಾಧ್ಯವಾಗಿಲ್ಲ. ಚೀನಾದಲ್ಲಿ ಈಗಲೂ ಸಾವಿರಾರು ಜನ ಸಾಯುತ್ತಿದ್ದಾರೆ. ಆದರೆ, ಮೋದಿ ಅವರು 130 ಕೋಟಿ ಜನರಿಗೆ ಡಬಲ್ ಡೋಸ್ ಲಸಿಕೆ ನೀಡಿದ್ದಾರೆ. ಬೂಸ್ಟರ್ ಡೋಸ್‌ಗೂ ಅನುವು ಮಾಡಿಕೊಟ್ಟಿದ್ದಾರೆ. 9 ತಿಂಗಳಲ್ಲಿ ಲಸಿಕೆ ಕಂಡುಹಿಡಿದ ದೇಶ ಭಾರತ. ಹೀಗಾಗಿ ಜನರ ಪ್ರಾಣ ಉಳಿಸುವಲ್ಲಿ ಮೋದಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.
ನರೇಂದ್ರ ಮೋದಿ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿ ಕೆಲಸ ಮಾಡುತ್ತಿದೆ. ಇದಕ್ಕೆ ಸಂಪುಟದಲ್ಲಿ ಎಸ್ಸಿಯ 8, ಪರಿಶಿಷ್ಟ ಪಂಗಡ, ಒಬಿಸಿಯ 27 ಮಂದಿಗೆ ಸಚಿವ ಸ್ಥಾನ, ರಾಮನಾಥ್ ಕೋವಿಂದ್, ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಮಾಡಿದೆ. ಬಡವರು, ಆದಿವಾಸಿಗಳು, ಹಿಂದುಳಿದ ವರ್ಗಗಳ ಏಳಿಗೆಗೆ ಹಲವು ಕಾರ್ಯಕ್ರಮ ನೀಡಿದೆ. ಬರ‌್ಸಾಮುಂಡಾ ಅವರ ಜನ್ಮದಿನವನ್ನು ಎಸ್‌ಟಿ ಗೌರವ ದಿನವನ್ನಾಗಿ ಆಚರಿಸಲಾಗುತ್ತಿದೆ. ಆದರೆ, ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಏಕೆ ಇದನ್ನು ಮಾಡಲಿಲ್ಲ ಎಂದು ಪ್ರಶ್ನಿಸಿದರು.
ರಾಜ್ಯ ಉಸ್ತುವಾರಿ ಅರುಣ್‌ಸಿಂಗ್, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್, ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಎಂಎಲ್‌ಸಿ ನವೀನ್, ಜಿಲ್ಲಾಧ್ಯಕ್ಷ ಎ.ಮುರಳಿ, ಮಾಜಿ ಅಧ್ಯಕ್ಷ ನರೇಂದ್ರನಾಥ್, ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ ಇತರರಿದ್ದರು.