ಭ್ರಷ್ಟಾಚಾರ-ಬೆಲೆ ಏರಿಕೆಯೇ ಕಾಂಗ್ರೆಸ್ ಸಾಧನೆ; ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಆರೋಪ

NADAHALLI PRESS MEETI CONGRESS SAMAVESHA
ವಿಜಯಪುರ ನಗರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರೈತ ಮೋರ್ಚಾದ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ‘ದುಬಾರಿ ಜೀವನ-ಅಭಿವೃದ್ಧಿ ಶೂನ್ಯ ಇದುವೇ ಕಾಂಗ್ರೆಸ್ ಸರ್ಕಾರದ ಸಾಧನೆ’ ಎಂಬ ಪೋಸ್ಟರ್ ಬಿಡುಗಡೆಗೊಳಿಸಿದರು. ಗುರುಲಿಂಗಪ್ಪ ಅಂಗಡಿ, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಉಮೇಶ ಕಾರಜೋಳ ಮತ್ತಿತರರಿದ್ದಾರೆ.
Published on

ವಿಜಯಪುರ: ಬೆಲೆ ಏರಿಕೆ, ಭ್ರಷ್ಟಾಚಾರ, ಹಗರಣಗಳೇ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ಬಿಜೆಪಿ ರೈತ ಮೋರ್ಚಾದ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಟೀಕಿಸಿದರು.

ವಿಜಯನಗರದ ಹೊಸಪೇಟೆಯಲ್ಲಿ ಕಾಂಗ್ರೆಸ್ ತನ್ನ ಎರಡು ವರ್ಷಗಳ ಸಾಧನೆ ಸಮಾವೇಶ ಹಮ್ಮಿಕೊಂಡಿದ್ದು, ಅದಕ್ಕೂ ಮುನ್ನ ಮುಡಾಹಗರಣ, ವಾಲ್ಮೀಕಿ ನಿಗಮದ ಹಗರಣ, ಬೆಲೆ ಏರಿಕೆ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ಜಾತಿ-ಜಾತಿಗಳ ಮಧ್ಯೆ ಜಗಳ ಹಚ್ಚುವುದು, ಧರ್ಮ-ಧರ್ಮಗಳ ಮಧ್ಯೆ ಬಿರುಕು ಮೂಡಿಸುವುದು, ಮುಸ್ಲಿಂರ ಓಲೈಕೆಯೇ ಕಾಂಗ್ರೆಸ್‌ನ ಸಾಧನೆಯಾಗಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ದರೋಡೆಗೆ ಇಳಿದ ಸರ್ಕಾರ ವಾಲ್ಮೀಕಿ ನಿಗಮದ ಹಣ ಲೂಟಿ ಮಾಡಿತು. ಸ್ವತಃ ಸಿದ್ದರಾಮಯ್ಯ ಅವರೇ ಮುಡಾ ಹಗರಣದಲ್ಲಿ ಸಿಲುಕಿದರು. ರಾಜ್ಯದ ಗುತ್ತಿಗೆದಾರರ ಸಂಘ ಸಾಕಷ್ಟು ಮನವಿ ಮಾಡಿದರೂ ಬಾಕಿ ಹಣ ಪಾವತಿಸಲಿಲ್ಲ. ಎಲ್‌ಒಸಿ ಪಡೆಯಲು ಇಪ್ಪತ್ತು ಪರ್ಸೆಂಟ್ ಹಣ ಕೊಡಬೇಕೆಂದು ಗುತ್ತಿಗೆದಾರರು ಆರೋಪಿಸಿದರು. ಇದೇನಾ ನಿಮ್ಮ ಸಾಧನೆ ಎಂದು ಕಾಂಗ್ರೆಸ್ಸಿಗರ ಕಾಲೆಳೆದರು.

ಕಾಂಗ್ರೆಸ್ ಸರ್ಕಾರ ಜನ್ಮದಾಖಲೆಯಿಂದ ಹಿಡಿದು ಮರಣ ಪತ್ರದವರೆಗೂ ತೆರಿಗೆ ಹಾಕಿದ್ದಾರೆ. ಹಾಲಿನಿಂದ ಹಿಡಿದು ಆಲ್ಕೋಹಾಲ್‌ವರೆಗೆ ದರ ಹೆಚ್ಚಿಸಿದ್ದಾರೆಂದು ಲೇವಡಿ ಮಾಡಿದ ಮಾಜಿ ಶಾಸಕ ನಡಹಳ್ಳಿ, ಸ್ಮಾರ್ಟ್ ಮೀಟರ್ ದಂಧೆ ಜೋರಾಗಿದ್ದು ಸುಮಾರು 15 ಕೋಟಿ ರೂಪಾಯಿ ಹಗರಣ ನಡೆದಿದೆ. ಸಚಿವ ಜಾರ್ಜ್ ಈ ದಂಧೆಯಲ್ಲಿ ನೇರವಾಗಿ ಭಾಗಿಯಾಗಿದ್ದಾರೆಂಬ ಆರೋಪದಡಿ ಲೋಕಾಯುಕ್ತಕ್ಕೆ ದೂರು ಸಹ ಸಲ್ಲಿಸಲಾಗಿದೆ ಎಂದರು.

ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳಿಗೆ ಬಿಡಿಗಾಸು ಸಹ ನೀಡಿಲ್ಲ. ಹಸಿರಿನಿಂದ ಕಂಗೊಳಿಸಬೇಕಾದ ಜಿಲ್ಲೆಯಲ್ಲೀಗ ಲಿಂಬೆ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರಿಗೆ ಮೊರೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಆಂದ್ರ-ತೆಲಂಗಾಣಕ್ಕೆ ನೀರು ಬಿಡುವ ಸರ್ಕಾರ ಕೆರೆ ತುಂಬಿಸಲು ನೀರು ಹರಿಸಿಲ್ಲ ಎಂದರು.

ಉಸ್ತುವಾರಿ ಮಂತ್ರಿ ವಿರುದ್ಧ ಗುಡುಗು

ಹಿಂದೆ ಮೂರು ತಿಂಗಳಿಗೊಮ್ಮೆ ಕೆಡಿಪಿ ಸಭೆ ನಡೆಯುತ್ತಿತ್ತು. ಪ್ರತಿ ಇಲಾಖೆ ಆಳವಾಗಿ ಚರ್ಚೆಗೊಳಪಡುತ್ತಿತ್ತು. ಈ ಜಿಲ್ಲೆಯ ಉಸ್ತುವಾರಿ ಸಚಿವರು ಆ ರೀತಿ ಚರ್ಚೆ ಮಾಡಿದ ಉದಾಹರಣೆ ಇಲ್ಲ. ಸಮಯ ಕಾಳಜಿ ಇಲ್ಲವೇ ಇಲ್ಲ. ಉಸ್ತುವಾರಿ ಸಚಿವರು ಅವರ ಕ್ಷೇತ್ರ ಬಿಟ್ಟು ಉಳಿದ ಹಳ್ಳಿಗೆ ಭೇಟಿ ನೀಡಿ ಜನರ ಸಂಪರ್ಕ ಆಲಿಸಿದ ಉದಾಹರಣೆ ಇದೆಯಾ? ಎಂದರು.

ರೈತರ ತೊಗರಿ ಬೆಳೆಗೆ ಕಳಪೆ ಬಿತ್ತನೆ ಬೀಜ ಪೂರೈಸಿದ ಕಾಂಗ್ರೆಸ್ ಸರ್ಕಾರ ಈವರೆಗೆ ಪರಿಹಾರ ನೀಡಿಲ್ಲ. ಬೆಂಬಲ ಬೆಲೆ ಯೋಜನೆಯಡಿ ಎಷ್ಟು ಕ್ವಿಂಟಾಲ್ ಖರೀದಿ ಮಾಡಿದ್ದೀರಿ? ಎಪಿಎಂಸಿ ಸಚಿವರು ಜನರ ಮುಂದೆ ಮಾಹಿತಿ ನೀಡಬೇಕಲ್ಲವೇ? ಸಾವಿರ ಕ್ವಿಂಟಾಲ್ ತೊಗರಿ ಸಹ ಖರೀದಿ ಮಾಡಿಲ್ಲ. ಇಂದಿಗೂ ಕಳಪೆ ಬೀಜ ಹಾಗೂ ಔಷಧ ಮಾರಾಟ ದಂಧೆ ನಡೆಯುತ್ತಿದೆ. ಎಲ್ಲ ಹಂತದಲ್ಲಿ ಬಿತ್ತನೆ ಬೀಜ ಪರೀಕ್ಷಿಸಿದ ಬಳಿಕ ರೈತರಿಗೆ ಕೊಡಬೇಕು. ಆ ಪ್ರಕ್ರಿಯೆ ನಡೆಯುತ್ತಿಲ್ಲ. ಯಲಹಂಕಾದ ಕೇಂದ್ರವೊಂದರಲ್ಲಿ ದುಡ್ಡು ಕೊಟ್ಟು ಪ್ರಮಾಣ ಪತ್ರ ತರುವ ಕೆಲಸ ನಡೆಯುತ್ತಿದೆ. ಇಬ್ಬರು ಸಚಿವರು ಕಣ್ಮುಚ್ಚಿ ಕುಳಿತಿದ್ದಾರೆ. ಮತ್ತು ಕಳಪೆ ಬಿತ್ತನೆ ಬೀಜ ಪೂರೈಸುವವರು ಕಾಂಗ್ರೆಸ್ ಏಜೆಂಟ್ ರು ಎಂದರು.

ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಇಟ್ಟಂಗಿಹಾಳದಲ್ಲಿ ಸುಮಾರು 70 ಎಕರೆ ಜಮೀನು ಫುಡ್ ಪಾರ್ಕ್‌ಗೆ ಮೀಸಲಿಟ್ಟರೂ ಈವರೆಗೆ ಕಾರ್ಯಗತಗೊಂಡಿಲ್ಲ. ಎಂ.ಬಿ. ಪಾಟೀಲರು ಎರಡು ವರ್ಷ ಜಿಲ್ಲೆಗೆ ಯಾವುದೇ ಕೊಡುಗೆ ನೀಡಿಲ್ಲ. ಹೀಗಿರುವಾಗ ಸಮಾವೇಶದಲ್ಲಿ ಯಾವ ಸಾಧನೆ ಹೇಳಿಕೊಳ್ಳುತ್ತೀರಿ? ನಿಮ್ಮದು ಶೂನ್ಯ ಸಾಧನೆಯ ಸಮಾವೇಶ ಎಂದರು.

ಎಸ್‌ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಮಾತನಾಡಿ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಸಮನ್ವಯ ಸಾಧಿಸದೇ ಇರುವುದು ಸಾಧನೆಯೇ? ದುಬಾರಿ ಜೀವನದ ಗ್ಯಾರಂಟಿ ನೀಡಿರುವುದು ಸಾಧನೆಯೇ? ಹೆಮ್ಮೆಯ ಸೈನಿಕರು ಹಾಗೂ ದೇಶದ ಬಗ್ಗೆ ಕಾಂಗ್ರೆಸ್ ನಾಯಕರು ಅವಮಾನಕಾರಿ ಹೇಳಿಕೆ ನೀಡಿರುವುದು ಸಾಧನೆಯೇ? ವಿವಿಧ ಹಗರಣಗಳನ್ನು ನಡೆಸಿರುವುದು ಸಾಧನೆಯೇ? ಮಹಿಳೆಯರ ಅಸುರಕ್ಷತೆ ಹಾಗೂ ಅನೇಕ ಹಿಂದೂ ಕಾರ್ಯಕರ್ತರ ಹತ್ಯೆ ನಡೆದಿದ್ದು ಸಾಧನೆಯೇ? ಎಂದು ಹಲವು ಪ್ರಶ್ನೆಗಳ ಸುರಿಮಳೆಗೈಯ್ದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಸುರೇಶ ಬಿರಾದಾರ, ಈರಣ್ಣ ರಾವೂರ, ವಿಜಯಕುಮಾರ ಜೋಷಿ ಮತ್ತಿತರರಿದ್ದರು. ‘ದುಬಾರಿ ಜೀವನ-ಅಭಿವೃದ್ಧಿ ಶೂನ್ಯ ಇದುವೇ ಕಾಂಗ್ರೆಸ್ ಸರ್ಕಾರದ ಸಾಧನೆ’ ಎಂಬ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net