ಭ್ರಷ್ಟ ರಾಜ್ಯ ಸರ್ಕಾರಕ್ಕೆ ಬುದ್ಧಿ ಕಲಿಸಬೇಕು : ಆರ್. ಅಶೋಕ್

R Ashoka
Published on

ಮೈಸೂರು: ಭ್ರಷ್ಟ ರಾಜ್ಯ ಸರ್ಕಾರಕ್ಕೆ ಬುದ್ಧಿ ಕಲಿಸಲು ಈ ಚುನಾವಣೆ ನಮಗೆ ಬಹಳ ಮುಖ್ಯವಾಗಿದೆ. ಹಾಗಾಗಿ ಪರಿಷತ್ ಚುನಾವಣೆಯನ್ನು ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಗಂಭೀರವಾಗಿ ಪರಿಗಣಿಸಿ ಎನ್‌ಡಿಎ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಕರೆ ನೀಡಿದರು.

ನಗರದ ಜೆಎಲ್‌ಬಿ ರಸ್ತೆಯ ಗೋವಿಂದರಾವ್ ಮೆಮೋರಿಯಲ್ ಹಾಲ್‌ನಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಕೂಟದಿಂದ ಹಮ್ಮಿಕೊಂಡಿದ್ದ ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು, ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಇ.ಸಿ. ನಿಂಗರಾಜ್ ಗೌಡ ನಾಮಪತ್ರ ಸಲ್ಲಿಸಿದ್ದಾರೆ. ಇದೀಗ ಎನ್‌ಡಿಎ ಅಭ್ಯರ್ಥಿಯಾಗಿ ಕೆ. ವಿವೇಕಾನಂದ ಅವರನ್ನು ಕಣಕ್ಕಿಳಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ನಾಮಪತ್ರ ಹಿಂಪಡೆಯುತ್ತಾರೆ. ವಿಧಾನ ಪರಿಷತ್‌ನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಬಹುಮತ ಹೊಂದಿದ್ದೇವೆ. ಜನವಿರೋಧಿ ಮಸೂದೆ ಬಂದರೆ ತಡೆ ಹಿಡಿಯುವ ಹಾಗೂ ನ್ಯಾಯಯುತವಾದ ಮಸೂದೆಗಳಿಗೆ ಅನುಮೋದನೆ ನೀಡುವ ಕಾರ್ಯ ಮಾಡುತ್ತೇವೆ ಎಂದರು.

ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ನಾವು ಯಾವುದೇ ಟೀಕೆ ಟಿಪ್ಪಣಿ ಮಾಡಲು ಹೋಗುವುದಿಲ್ಲ. ಏಕೆಂ ದರೆ ಹೊಸ ಸರ್ಕಾರ ಉತ್ತಮ ಕೆಲಸ ಮಾಡುತ್ತದೆ ಎಂಬ ನಂಬಿಕೆಯ ಕಾರಣಕ್ಕೆ. ಆದರೆ, ಈ ಮನೆಹಾಳು ಕಾಂಗ್ರೆಸ್ ಸರ್ಕಾರ ಒಂದು ವರ್ಷದ ಅವಧಿಯಲ್ಲಿ ಒಂದು ಒಳ್ಳೆಯ ಕೆಲಸವನ್ನೂ ಮಾಡಿಲ್ಲ, ಎಲ್ಲ ಮನೆ ಹಾಳು ಕೆಲಸವನ್ನೇ ಮಾಡಿದೆ. ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ಹತ್ಯೆ ನಡೆಯಿತು, ಇದೀಗ ಅಂಜಲಿ ಹತ್ಯೆ ನಡೆದಿದೆ. ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಹಾಗೂ ಸರ್ಕಾರ ಸತ್ತಿದೆಯಾ, ಬದುಕಿದೆಯಾ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ನಡೆಸಿದಾಗಲೆಲ್ಲ ಬರಗಾಲ ಎದುರಾಗಿದೆ. ಬರಗಾಲ ನಿಭಾಯಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮಾತೆತ್ತಿದ್ದರೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಕಾಂಗ್ರೆಸ್ ನಾಯಕರು ಟೀಕಿಸುತ್ತಿದ್ದರು. ಇದೀಗ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಆದರೆ, ರಾಜ್ಯ ತನ್ನ ಪಾಲಿನ ಹಣವನ್ನು ಏತಕ್ಕೆ ಇದುವರೆಗೆ ನೀಡಿಲ್ಲ. ಒಂದು ನಯಾ ಪೈಸೆ ಹಣ ಇದುವರೆಗೆ ಬಿಡುಗಡೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡರು ಲೂಟಿಯಲ್ಲಿ ಮುಳುಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಒಟ್ಟು ಆಸ್ತಿ ಕೇವಲ ಮೂರು ಕೋಟಿ ರೂ. ಮಾತ್ರ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಸ್ತಿ ಎಷ್ಟು? ಲೂಟಿಯಲ್ಲಿ ಮುಳುಗಿರುವ ಕಾಂಗ್ರೆಸ್ ನಾಯಕರು ರಾಜ್ಯದ ಜನರ ಸಮಸ್ಯೆಗಳನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ಹಾಲು ಉತ್ಪಾದಕರಿಗೆ ಕಳೆದ 8 ತಿಂಗಳಿನಿಂದ ಹಣ ನೀಡಿಲ್ಲ, ಒಟ್ಟು 750 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ. 108 ಆ್ಯಂಬುಲೆನ್ಸ್ ಚಾಲಕರಿಗೆ ಮೂರು ತಿಂಗಳಿನಿಂದ ವೇತನ ನೀಡಿಲ್ಲ, ಪೌರ ಕಾರ್ಮಿಕರಿಗೆ ಮೂರು ತಿಂಗಳಿನಿಂದ ವೇತನ ನೀಡಿಲ್ಲ, ಅತಿಥಿ ಉಪನ್ಯಾಸಕರಿಗೂ ಗೌರವ ಧನ ನೀಡಿಲ್ಲ. ಇದು ಹೀಗೆಯೇ ಮುಂದುವರೆದರೆ ಕೇರಳದ ರೀತಿಯಲ್ಲಿ ನಮ್ಮ ರಾಜ್ಯ ಪಾಪರ್ ಆಗಲಿದೆ ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net