

ಹುಬ್ಬಳ್ಳಿ : ಧಾರವಾಡ ಲೋಕಸಭಾ ಕ್ಷೇತ್ರದ ಧಾರವಾಡ ಜಿಲ್ಲೆ ಮತ್ತು ಹಾವೇರಿ ಜಿಲ್ಲೆಯ ಶಿಗ್ಗಾಂವಿ ಮತ್ತು ಸವಣೂರ ತಾಲೂಕುಗಳ ರೈತರಿಗೆ 2023- 24 ನೇ ಸಾಲಿನ ಎಸ್.ಡಿ.ಆರ್.ಎಫ್. ಮತ್ತು ಎನ್.ಡಿ.ಆರ್.ಎಫ್. ಅಡಿ ಬೆಳೆ ಪರಿಹಾರ ವಿತರಣೆಯಲ್ಲಿ ಹಲವಾರು ಲೋಪದೋಷಗಳು ಉಂಟಾಗಿದ್ದು, ಇದರಿಂದಾಗಿ ರೈತರಿಗೆ ಸೂಕ್ತ ಬೆಳೆನಷ್ಟ ಪರಿಹಾರ ದೊರಕಿಲ್ಲ. ಕೂಡಲೇ ಈ ಬಗ್ಗೆ ಸೂಕ್ತ ಕ್ರಮವಹಿಸುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ ಸಚಿವ ಚಲುವರಾಯ ಸ್ವಾಮಿ ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿ ಸೆಲ್ವಕುಮಾರ ಅವರಿಗೆ ಪ್ರಲ್ಹಾದ ಜೋಶಿ ಪತ್ರ ಬರೆದಿದ್ದಾರೆ.
ಧಾರವಾಡ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ರೈತರಿಗೆ ಬೆಳೆ ಪರಿಹಾರದಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ವಿವರವಾಗಿ ಪತ್ರದಲ್ಲಿ ಬರೆದಿದ್ದಾರೆ.
ಹುಬ್ಬಳ್ಳಿ ತಾಲೂಕಿನ ಕೋಳಿವಾಡ ಗ್ರಾಮದಲ್ಲಿನ ಅಂದಾಜು 2,600 ಫ್ರ್ರೂಟ್ಐಡಿಗೆ ದಾಖಲಾಗಿರುವ ರೈತರ ಖಾತೆಗಳಿದ್ದು, ಅದರಲ್ಲಿ ಕೇವಲ 680 ಖಾತೆಗಳಿಗೆ ಮಾತ್ರ ಬರಪರಿಹಾರ ಮೊತ್ತ ಜಮೆಯಾಗಿದೆ. ಇದರಲ್ಲಿಯೂ 2 ಹೆಕ್ಟೇರ್ ಮತ್ತು ಅದಕ್ಕಿಂತ ಹೆಚ್ಚಿನ ಹಿಡುವಳಿ ಹೊಂದಿರುವ ರೈತರಿಗೆ ಕೇವಲ ಒಂದು ಹೆಕ್ಟೇರ್ಗೆ ಮಾತ್ರ ಬೆಳೆ ನಷ್ಟ ಪರಿಹಾರ ದೊರೆತಿದೆ. ಬೆಳೆ ಪರಿಹಾರ ಪಡೆಯಲು ಇರಬೇಕಾದ ಮಾನದಂಡಗಳ ಪೈಕಿ ಎಲ್ಲವುಗಳನ್ನು ಪೂರೈಸಿರುವ ರೈತರ ಖಾತೆಗಳಿಗೆ ಬೆಳೆ ಪರಿಹಾರ ಮೊತ್ತ ಜಮೆಯಾಗದಿರವುದು ಅಥವಾ ಅತೀ ಕಡಿಮೆ ಮೊತ್ತ ಜಮೆಯಾಗಿರುವುದು ದುರ್ದೈವದ ಸಂಗತಿಯಾಗಿದೆ. ಇದರ ಬಗ್ಗೆ ಕೆಲವು ರೈತರು ನನಗೆ ದೂರು ಸಲ್ಲಿಸಿ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ತಾಳೆ ಮಾಡಿದಾಗ ವ್ಯತ್ಯಾಸಗಳು ಕಂಡುಬಂದಿವೆ ಎಂದು ಜೋಶಿ ತಿಳಿಸಿದ್ದಾರೆ.
ಈ ರೀತಿಯ ಹಲವಾರು ಉದಾಹರಣೆಗಳು ಧಾರವಾಡ ಜಿಲ್ಲೆ ಮತ್ತು ಹಾವೇರಿ ಜಿಲ್ಲೆಯ ಶಿಗ್ಗಾಂವಿ ಮತ್ತು ಸವಣೂರು ತಾಲೂಕು ವ್ಯಾಪ್ತಿಯಲ್ಲಿವೆ.
ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ರೈತರಿಗೆ ಎಸ್.ಡಿ.ಆರ್.ಎಫ್. ಮತ್ತು ಎನ್.ಡಿ.ಆರ್.ಎಫ್. ಅಡಿ ಬರಪರಿಹಾರ ಹಣ ಪಾವತಿ ಪ್ರಕ್ರಿಯೆಯಲ್ಲಿ ಉಂಟಾಗಿರುವ ಲೋಪದೋಷಗಳನ್ನು ತಕ್ಷಣ ಸರಿಪಡಿಸಬೇಕು. ಎಲ್ಲ ರೈತರಿಗೂ ಬೆಳೆ ಪರಿಹಾರ ಜಮಾ ಮಾಡಬೇಕು ಹಾಗೂ ಲೋಪದೋಷಗಳನ್ನು ಮಾಡಿರುವ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಮುಂದಿನ ಆರ್ಥಿಕ ವರ್ಷದಲ್ಲಿ ಇಂತಹ ಘಟನೆಗಳಾಗದಂತೆ ಎಚ್ಚರಿಕೆ ವಹಿಸಬೇಕೆಂದು ಪ್ರಲ್ಹಾದ ಜೋಶಿ ಆಗ್ರಹಿಸಿದ್ದಾರೆ.