ಪದವಿಯಲ್ಲಿ ಕನ್ನಡ ಬೋಧನೆಗಾದ ಅನ್ಯಾಯ ಸರಿಪಡಿಸಿ: ಪ್ರೊ. ಬರಗೂರು ರಾಮಚಂದ್ರಪ್ಪ ಒತ್ತಾಯ

baraguru-ramachandrappa
Published on

ಬೆಂಗಳೂರು: ಕೇಂದ್ರ ಸರ್ಕಾರದ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ (ಎನ್.ಇ.ಪಿ.) ಯಲ್ಲಿ ಕನ್ನಡಕ್ಕೆ ಇದ್ದ ಪ್ರತಿ ಸೆಮಿಸ್ಟರ್‌ನ ನಾಲ್ಕು ಘಂಟೆಗಳ ಬೋಧನಾ ಅವಧಿಯನ್ನು ರಾಜ್ಯ ಶಿಕ್ಷಣ ನೀತಿ (ಎಸ್.ಇ.ಪಿ) ಯಲ್ಲಿ ಮೂರು ಗಂಟೆಗೆ ಇಳಿಸಿರುವುದು ಭಾಷಾ ಅಧ್ಯಯನಕ್ಕೆ ಮಾಡಿರುವ ಅನ್ಯಾಯ. ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಕುರಿತು ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದಿರುವ ಅವರು, ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯ ಪಠ್ಯಕ್ರಮದಲ್ಲಿ ಕನ್ನಡವನ್ನು ಮೊದಲಿಗೆ ಎರಡು ಸೆಮಿಸ್ಟರ್‌ಗಳಿಗೆ ಮಾತ್ರ ಸೀಮಿತಗೊಳಿಸಿದಾಗ ನನ್ನನ್ನೂ ಒಳಗೊಂಡಂತೆ ಅನೇಕರ ಪ್ರತಿರೋಧಕ್ಕೆ ಒಪ್ಪಿ ನಾಲ್ಕು ಸೆಮಿಸ್ಟರ್‌ಗಳಿಗೆ ವಿಸ್ತರಿಸಿ, ಪ್ರತಿ ಸೆಮಿಸ್ಟರ್‌ಗೆ ನಾಲ್ಕು ಗಂಟೆಗಳ ಬೋಧನಾವಧಿ ನಿಗದಿಪಡಿಸಲಾಗಿತ್ತು. ಆದರೆ ರಾಜ್ಯ ಶಿಕ್ಷಣ ನೀತಿಯಲ್ಲಿ ಬೋಧನಾ ಅವಧಿಯನ್ನು ಮೂರು ಗಂಟೆಗೆ ಇಳಿಕೆ ಮಾಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಆದೇಶದಲ್ಲಿ ಪಠ್ಯಕ್ರಮ ವಿನ್ಯಾಸ ಸಮಿತಿಯ ವರದಿಯಂತೆ ವಿವಿಧ ವಿಶ್ವವಿದ್ಯಾಲಯಗಳು ಪದವಿಯ ಮೊದಲ ಎರಡು ಸೆಮಿಸ್ಟರ್‌ಗಳಿಗೆ (ಒಂದು ವರ್ಷಕ್ಕೆ) ಪಠ್ಯಕ್ರಮವನ್ನು ವಿನ್ಯಾಸಗೊಳಿಸಿ ಬೋಧನಾ ಅವಧಿಯನ್ನು ನಿಗದಿಗೊಳಿಸಿವೆ. ಕೆಲವು ವಿವಿಗಳು ಕನ್ನಡವನ್ನೂ ಒಳಗೊಂಡಂತೆ ಭಾಷಾ ವಿಷಯಗಳಿಗೆ ವಾರಕ್ಕೆ ಕೇವಲ ಮೂರು ಗಂಟೆಗಳನ್ನು ನಿಗದಿ ಮಾಡುವ ಮೂಲಕ ಅನ್ಯಾಯ ಮಾಡಿದ್ದು ಇದನ್ನು ಕೂಡಲೇ ಸರಿಪಡಿಸಿ ಎಲ್ಲ ವಿವಿಗಳಲ್ಲೂ ಪ್ರತಿ ಸೆಮಿಸ್ಟರ್‌ನಲ್ಲಿ ವಾರಕ್ಕೆ ನಾಲ್ಕು ಗಂಟೆ ಕನ್ನಡ ಬೋಧಿಸುವಂತೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net