

ಮೈಸೂರು: ಕೋಚನಹಳ್ಳಿ ರೈತರಿಗೆ ಆಗಿರುವ ಅನ್ಯಾಯವನ್ನು ಕೂಡಲೇ ಸರಿಪಡಿಸಬೇಕು. ಇಲ್ಲದಿದ್ದಲ್ಲಿ ಪಾದಯಾತ್ರೆಯಂತಹ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕೋಚನಹಳ್ಳಿ ಹೋರಾಟ ಸಮಿತಿಯ ಮುಖಂಡ ಹೊಸಕೋಟೆ ಬಸವರಾಜು ಎಚ್ಚರಿಸಿದ್ದಾರೆ.
ತಾಲೂಕಿನ ಕೋಚನಹಳ್ಳಿಯಲ್ಲಿನ ಸುಮಾರು 400 ಎಕರೆ ಭೂಮಿಯನ್ನು 215 ರೈತರಿಗೆ ನೇರ ನೇಮಕಾತಿ ಪತ್ರ ನೀಡಲಾಗುವುದು ಎಂಬ ಭರವಸೆ ನೀಡಿ ಈ ಹಿಂದೆ ಬೇನಾಮಿ ಹೆಸರಿನಲ್ಲಿ ಕೆಲವರು ಖರೀದಿಸಿದರು. ಈ ವೇಳೆ ಎಕರೆಗೆ ಒಂದರಿಂದ ಒಂದೂವರೆ ಲಕ್ಷ ರೂ. ಮಾತ್ರ ನೀಡಿದರು. ಬಳಿಕ ಕೆಐಎಡಿಬಿ ಅದೇ ಜಮೀನನ್ನು ಎಕರೆಗೆ ಸುಮಾರು 47 ಲಕ್ಷ ರೂ. ನೀಡಿ ಖರೀದಿಸಿದೆ. ಈ ನಡುವೆ ರೈತರಿಗೆ ಈ ನಿಟ್ಟಿನಲ್ಲಿ ಪರಿಹಾರವೂ ದೊರೆತಿಲ್ಲ. ಉದ್ಯೋಗವೂ ದೊರೆತಿಲ್ಲ. ಹೀಗಾಗಿ ಈ ನಿಟ್ಟಿನಲ್ಲಿ ನಡೆಸಿದ ಹೋರಾಟದ ವೇಳೆ ಸರ್ಕಲ್ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ತನಿಖೆ ನಡೆಸಿ ಪರಿಹಾರ ಒದಗಿಸುವುದಾಗಿ ತಿಳಿಸಲಾಗಿತ್ತಾದರೂ ತನಿಖೆ ಪ್ರಗತಿಯಲಿಲ್ಲ. ಹೀಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಡಿವೈಎಸ್‌ಪಿ ಮಟ್ಟದಲ್ಲಿ ಶೀಘ್ರ ತನಿಖೆ ನಡೆಸಿ ರೈತರಿಗೆ ಪರಿಹಾರ ಒದಗಿಸಬೇಕು. ಇಲ್ಲದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಮುಖಂಡ ಉಗ್ರನರಸಿಂಹೇಗೌಡ ಮಾತನಾಡಿ, ರೈತರಿಂದ ಭೂಮಿ ಪಡೆದ ಹಲವಾರು ಕಾರ್ಖಾನೆಗಳೂ ಭೂಮಿ ನೀಡಿದ ರೈತರಿಗೆ ಉದ್ಯೋಗ ನೀಡಿದರೂ ಕನಿಷ್ಠ ವೇತನವನ್ನೂ ಕೊಡುತ್ತಿಲ್ಲ. ವರ್ಷಗಟ್ಟಲೆ ಟ್ರೈನಿಗಳೆಂದೇ ಮುಂದುವರಿಸಲಾಗಿದೆ. ಇದೇ ರೀತಿ ಕಾರ್ಖಾನೆಯೊಂದಕ್ಕೆ ಕೆಲಸ ಕೇಳಿಹೋದ ಭೂಮಿ ನೀಡಿದ ರೈತ ಸಿದ್ದರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಡೆತ್‌ನೋಟ್‌ನಲ್ಲಿ ಹೆಸರಿಸಿರುವವರ ವಿರುದ್ಧ ಕ್ರಮ ಕೈಗೊಂಡು, ಮೃತನ ಕುಟುಂಬಕ್ಕೆ ಪರಿಹಾರ ಒದಗಿಸಿಲ್ಲ ಎಂದು ಬೇಸರಿಸಿದರು.
ಕಾರ್ಮಿಕ ಮುಖಂಡ ಚಂದ್ರಶೇಖರ ಮೇಟಿ ಮಾತನಾಡಿ, ಕಾರ್ಖಾನೆಗಳಿಗಾಗಿ ಭೂಮಿ ಕಳೆದುಕೊಂಡವರಿಗೆ ಉದ್ಯೋಗ ನೀಡಬೇಕು. ಇಲ್ಲದಿದ್ದರೆ ನೀರು, ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದೆಂದು ಕೆಲ ದಿನ ಹಿಂದೆ ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ. ಈ ಕ್ರಮ ಶೀಘ್ರ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮುಖಂಡರಾದ ಪಿ.ಮರಂಕಯ್ಯ, ಮಂಡಕಳ್ಳಿ ಮಹೇಶ್, ಚಂದ್ರಶೇಖರ್ ಇದ್ದರು.