

ವಿಜಯಪುರ: ವೃಂದ ನೇಮಕಾತಿ ನಿಯಮ ಬದಲಾವಣೆಯಿಂದಾಗಿ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ನೇತೃತ್ವ ನೂರಾರು ಶಿಕ್ಷಕರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಂಘದ ಕೋಶಾಧ್ಯಕ್ಷ ಸುರೇಶ ಶೆಡಶ್ಯಾಳ ಮಾತನಾಡಿ, ಸರ್ಕಾರ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಯ ಪದನಾಮ ಬದಲಾಯಿಸಿ ಹೊಸ ವೃಂದ ಹಾಗೂ ವೃಂದ ಬಲವನ್ನು ನಿರ್ಧರಿಸುವ ಕುರಿತು ವಿಶೇಷ ರಾಜ್ಯ ಪತ್ರ (ಸಂಖ್ಯೆ: 434 ದಿನಾಂಕ: 20-05-2017) ಹೊರಡಿಸಿದೆ. ಆ ಪ್ರಕಾರ ಪ್ರಾಥಮಿಕ ಶಾಲೆ ಸಹ ಶಿಕ್ಷಕ ವೃಂದವನ್ನು ಮುಖ್ಯವಾಗಿ ಪ್ರಾಥಮಿಕ ಶಾಲಾ ಶಿಕ್ಷಕರು 1 ರಿಂದ 5ಕ್ಕೆ 1,12,467 ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು 6 ರಿಂದ 8ಕ್ಕೆ 51,781 ಎಂದು ವೃಂದವಾರು ಹುದ್ದೆಗಳನ್ನು ಮಂಜೂರಿಸಿ ಆದೇಶಿಸಿದೆ. ತತ್ಪರಿಣಾಮ 2016ಕ್ಕಿಂತ ಮೊದಲು 1 ರಿಂದ 7 ಮತ್ತು 1 ರಿಂದ 8 ವೃಂದಕ್ಕೆ ನೇಮಕಗೊಂಡ ಎಲ್ಲ ಸಹ ಶಿಕ್ಷಕರು ಪ್ರಾಥಮಿಕ ಶಾಲೆ ಶಿಕ್ಷಕರು 1 ರಿಂದ 5 ಎಂದು ಪರಿಗಣಿಸಿದ್ದು ಶಿಕ್ಷಕರಿಗೆ ತೀವ್ರ ಅನ್ಯಾಯವಾಗಿದೆ ಎಂದರು.
ಹೊಸ ವೃಂದ ಬಲ ನಿಗದಿಯಾಗುವವರೆಗೆ ಪ್ರಾಥಮಿಕ ಶಾಲೆ ಸಹ ಶಿಕ್ಷಕ ವೃಂದದಿಂದ ಪ್ರೌಢಶಾಲೆ ಸಹ ಶಿಕ್ಷಕ ಗ್ರೇಡ್-2 ವೃಂದಕ್ಕೆ ನಿಯಮಿತವಾಗಿ ಬಡ್ತಿ ನೀಡುವಲ್ಲಿ ಯಾವುದೇ ಸಮಸ್ಯೆಗಳು ಇರಲಿಲ್ಲ. ಪ್ರಾಥಮಿಕ ಶಾಲೆಗಳಲ್ಲಿ 2017ರ ಹೊಸ ವೃಂದಬಲ ನಿಗದಿಯಿಂದಾಗಿ ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-2 ವೃಂದಕ್ಕೆ ಬಡ್ತಿ ನೀಡುವಾಗ ಗೊಂದಲಗಳು ಉಂಟಾದುದ್ದನ್ನು ನಮ್ಮ ಸಂಘಟನೆಯು ಬಲವಾಗಿ ತಿಳಿಸುತ್ತಾ ಬಂದಿದ್ದರೂ, ಅದನ್ನು ಪರಿಹರಿಸದೇ, ಮುಂದೂಡುತ್ತಾ ಬರಲಾಗಿದೆ ಎಂದು ಆರೋಪಿಸಿದರು.
1 ರಿಂದ 5 ಪ್ರಾಥಮಿಕ ಶಾಲಾ ಶಿಕ್ಷಕರೆಂದು ಪದನಾಮೀಕರಿಸಿರುವ 2016ಕ್ಕಿಂತ ಮೊದಲು ನೇಮಕವಾದ 1 ರಿಂದ 7 ಮತ್ತು 1 ರಿಂದ 8 ವೃಂದದ ಪ್ರಾಥಮಿಕ ಶಾಲಾ ಸಹ ಶಿಕ್ಷಕರಲ್ಲಿ ಸುಮಾರು 80,000ಕ್ಕೂ ಅಧಿಕ ಶಿಕ್ಷಕರು ಪದವಿಯೊಂದಿಗೆ ಬಿಇಡಿ ವಿದ್ಯಾರ್ಹತೆ ಹೊಂದಿದ್ದರೂ ಇವರನ್ನು 6 ರಿಂದ 8ಕ್ಕೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರೆಂದು ಪರಿಗಣಿಸದೇ ಇರುವುದು ದುರಾದೃಷ್ಟಕರ. ಇದರ ನಡುವೆ 2016ರಿಂದ ಇತ್ತೀಚೆಗೆ 6ರಿಂದ 8 ವೃಂದದ 20,110 ಶಿಕ್ಷಕರ ನೇಮಕಾತಿಯಾಗಿದ್ದು, ತತ್ಪರಿಣಾಮದಿಂದಾಗಿ ಅಷ್ಟೇ ಸಂಖ್ಯೆಯ 1 ರಿಂದ 5 ವೃಂದದ ಶಿಕ್ಷಕರ ಹೆಚ್ಚುವರಿ ಸಮಸ್ಯೆ ಸೃಷ್ಟಿಯಾಗಿತ್ತು. ಅದೇ ರೀತಿ ವರ್ಗಾವಣೆ ಪ್ರಕ್ರಿಯೆಯಲ್ಲೂ ಈ ವೃಂದ ಬಲದ ನಿಗದಿ ಸ್ಥಳಗಳ ಆಯ್ಕೆಯಲ್ಲಿ ತೀವ್ರವಾಗಿ ಶಿಕ್ಷಕರಿಗೆ ಸಮಸ್ಯೆ ಸೃಷ್ಟಿಸಿದೆ ಎಂದರು.
ಇದರ ಜೊತೆ ವೇತನ ಶ್ರೇಣಿಯೂ ವ್ಯತ್ಯಾಸವಾಗಿ ಶಿಕ್ಷಕರ ಮನೋಸ್ಥೈರ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ. ಈವರೆಗೂ 1 ರಿಂದ 5 ಶಿಕ್ಷಕ ವೃಂದದವರೆಂದು ಪರಿಗಣಿತವಾದ 1 ರಿಂದ 7 ಮತ್ತು 1 ರಿಂದ 8ಕ್ಕೆ ನೇಮಕಾತಿಯಾದ ಶಿಕ್ಷಕರು ಯಾವುದೇ ಆರ್ಥಿಕ ಸೌಲಭ್ಯ ಬಯಸದೇ 6 ರಿಂದ 8ನೇ ತರಗತಿ ನಿರ್ವಹಣೆ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದಾರೆ. ಇದೇ ಸಂದರ್ಭದಲ್ಲಿ 6 ರಿಂದ 8ನೇ ತರಗತಿಗೆ ನೇಮಕವಾದ 20,110 ಶಿಕ್ಷಕರು ಕೇವಲ 6 ರಿಂದ 8ನೇ ತರಗತಿ ಬೋಧನೆ ಮಾತ್ರ ಮಾಡುತ್ತಿದ್ದು, 1 ರಿಂದ 5ನೇ ತರಗತಿ ಬೋಧನೆಯಲ್ಲಿ ಭಾಗವಹಿಸುತ್ತಿಲ್ಲ. ಆದರೆ 1 ರಿಂದ 7 ಮತ್ತು 1 ರಿಂದ 8ಕ್ಕೆ ನೇಮಕಾತಿಯಾದ ಪ್ರಾಥಮಿಕ ಶಾಲೆ ಸಹ ಶಿಕ್ಷಕರು ಇಲಾಖೆಗೆ ಮುಜುಗರವಾಗದಂತೆ 1 ರಿಂದ 8ನೇ ತರಗತಿವರೆಗಿನ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳನ್ನು ಸಮರ್ಥವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಲಕ್ಷಾಂತರ ಪ್ರಾಥಮಿಕ ಶಾಲಾ ಶಿಕ್ಷಕರಿಗಾದ ಬಹುದೊಡ್ಡ ಅನ್ಯಾಯವನ್ನು ಗಂಭೀರವಾಗಿ ಪರಿಗಣಿಸಿ, ತುರ್ತಾಗಿ ಉಲ್ಲಂಘನೆಯಾಗಿರುವ ನಿಯಮಗಳನ್ನು ಸರಿಪಡಿಸುವುದರ ಜೊತೆಗೆ ನಿರಂತರ ಸೇವಾನುಭವ ಮತ್ತು ಉನ್ನತ ವಿದ್ಯಾರ್ಹತೆ ಹೊಂದಿರುವ ಸೇವಾನಿರತ ಶಿಕ್ಷಕರಿಗೆ ಯಾವುದೇ ರೀತಿಯ ತಾರತಮ್ಯ ಹಾಗೂ ಅನ್ಯಾಯವಾಗದಂತೆ ನಿಯಮ ರೂಪಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಜಿ.ಎಸ್. ಬೆವನೂರ, ಎ.ಜಿ. ಲಮಾಣಿ, ಜುಬೇರ ಕೆರೂರ, ಬಿ.ಟಿ. ಗೌಡರ, ರವೀಂದ್ರ ಉಗಾರ, ನಿಜು ಎಂ. ಮೇಲಿನಕೇರಿ, ಎಂ.ಎಂ. ವಾಲಿಕಾರ, ಪುಷ್ಪಾ ಗಚ್ಚಿನಮಠ, ರೇಣುಕಾ ಆಳೂರ, ಎಸ್.ಎಸ್. ಕುಲಕರ್ಣಿ, ಗಿರೀಶ ಗತಾಟೆ, ಟಿ.ಕೆ. ಜಂಬಗಿ, ಆರ್.ಆರ್. ಹುಣಶಿಗಿಡದ, ಎಸ್.ಎನ್. ಪಡಶೆಟ್ಟಿ, ಸಾಹೇಬಲಾಲ ದಳವಾಯಿ, ಎಚ್.ಎಂ. ಚಿತ್ತರಕಿ, ವೈ.ಟಿ. ಪಾಟೀಲ, ಆನಂದ ಭೂಸನೂರ, ಎ.ಬಿ. ಧಡಕೆ, ಎಸ್.ಎಸ್. ಸೊನ್ನಗಿ, ಎ.ಎಚ್. ವಾಲಿಕಾರ, ಬಿ.ಎಸ್. ಮಠ, ಎಂ.ಎಸ್. ಮುಕರ್ತಿಹಾಳ, ಬಿ.ಟಿ. ವಜ್ಜಲ, ಬಿ.ಎಸ್. ಮಜ್ಜಗಿ, ಎಸ್.ಡಿ. ಪಾಟೀಲ, ಶಿವಾನಂದ ಮಂಗಾನವರ, ಎಸ್.ಆರ್. ಪಾಟೀಲ ಮತ್ತಿತರರಿದ್ದರು.