ಸರ್ಕಾರಿ ಶಾಲೆ ದಾಖಲೆ ಸರಿಪಡಿಸಿಕೊಳ್ಳಿ

ಸರ್ಕಾರಿ ಶಾಲೆ ದಾಖಲೆ ಸರಿಪಡಿಸಿಕೊಳ್ಳಿ
Published on

ಹಾಸನ: ಕಾಲುವೆ ಹಾಗೂ ರಸ್ತೆ ಹೊರತುಪಡಿಸಿ ಉಳಿದೆಲ್ಲ ಆಸ್ತಿಗೂ ಪೋಡಿಯಾಗಬೇಕೆನ್ನುವುದು ಸರ್ಕಾರದ ಧ್ಯೇಯವಾಗಿದ್ದು, ಸರ್ಕಾರಿ ಶಾಲೆಗಳ ದಾಖಲಾತಿ ಸರಿಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಎನ್. ಬಲರಾಮ್ ಅವರ, ಜಿಲ್ಲೆಯ 2396 ಶಾಲೆಗಳ ಪೈಕಿ 1368 ಶಾಲೆಗಳು ನಿಖರ ದಾಖಲಾತಿ ಹೊಂದಿದ್ದು, 1031 ಶಾಲೆಗಳಿಗೆ ದಾಖಲಾತಿಗಳೇ ಇಲ್ಲವೆಂಬ ಉತ್ತರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಲ್ಯಾಂಡ್ ಬೀಟ್ ಆ್ಯಪ್‌ನಡಿ ನಮೂದಿಸಲು ಅವಕಾಶ ಕಲ್ಪಿಸಲಾಗಿದೆ. ನಂತರ ತಹಸೀಲ್ದಾರ್ ಮೂಲಕ ಪ್ರಕ್ರಿಯೆ ಪ್ರಾರಂಭಿಸಬಹುದು. ಖಾತೆ ಆಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿ ಆರ್‌ಟಿಸಿಗೆ ಕ್ರಮ ವಹಿಸಬೇಕು. ನಂತರ ಪೋಡಿ ಮಾಡಿ ಹೊಸ ಸರ್ವೆ ನಂಬರ್ ದೊರೆಯುತ್ತದೆ. ಜಿಲ್ಲೆಯ ಯಾವುದಾದರೂ ಹೋಬಳಿಯಿಂದ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಯಾರಾದರೂ ಶಾಲೆಗಳಿಗೆ ಜಾಗ ದಾನ ನೀಡಿದ ಪುರಾವೆಗಳಿದ್ದರೆ ಆರ್‌ಟಿಸಿಯಲ್ಲಿ ದಾಖಲು ಮಾಡಬೇಕು. ತಹಸೀಲ್ದಾರ್, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಎನ್.ಬಲರಾಮ್ ಮಾತನಾಡಿ, ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಸಂಖ್ಯೆ 72 ಸಾವಿರ ಇದ್ದು, ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆ ಸೇರಿ 2 ಲಕ್ಷ ಮಕ್ಕಳು ಪ್ರವೇಶ ಪಡೆದಿದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲಿ 22 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಬಾರಿ ಫಲಿತಾಂಶ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

1 ರಿಂದ 5 ವಿದ್ಯಾರ್ಥಿಗಳಿರುವ 362, 5 ರಿಂದ 10 ಮಕ್ಕಳಿರುವ 331, 11 ರಿಂದ 20 ಮಕ್ಕಳಿರುವ 675 ಹಾಗೂ 21 ರಿಂದ 30 ವಿದ್ಯಾರ್ಥಿಗಳಿರುವ 300 ಸರ್ಕಾರಿ ಶಾಲೆಗಳಿವೆ. ಚನ್ನರಾಯಪಟ್ಟಣ ತಾಲೂಕಿನಲ್ಲಿ ಪ್ರೌಢ ಶಾಲೆಯೊಂದರಲ್ಲಿ ಕೇವಲ ನಾಲ್ವರು ವಿದ್ಯಾರ್ಥಿಗಳಿದ್ದು ಮೂವರು ಶಿಕ್ಷಕರು ಪಾಠ ಮಾಡುತ್ತಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು.

ಗ್ರಾಪಂಗೊಂದು ಮಾದರಿ ಶಾಲೆ ಏಕೆ?: ಕೆಲವು ಖಾಸಗಿ ಶಿಕ್ಷಣ ಸಂಸ್ಥೆಯವರು ಒಂಬತ್ತನೇ ತರಗತಿ ವರೆಗೆ ಪ್ರವೇಶ ನೀಡಿ ನಂತರ ಇಲ್ಲಸಲ್ಲದ ಕಾರಣವೊಡ್ಡಿ ಪ್ರಮಾಣ ಪತ್ರ ಕೊಟ್ಟು ಕಳುಹಿಸುತ್ತಾರೆ. ಕಲಿಕೆಯಲ್ಲಿ ಹಿಂದುಳಿದ ಮಗು ಏಕಾಏಕಿ ಹತ್ತನೇ ತರಗತಿಗೆ ಬಂದಾಗ ಫಲಿತಾಂಶದಲ್ಲಿ ಇಳಿಕೆಯಾಗುವುದು ಸಾಮಾನ್ಯ. 8 ಮತ್ತು 9ನೇ ತರಗತಿಯಲ್ಲಿದ್ದಾಗ ಮಗುವಿಗೆ ಟಿಸಿ ಕೊಟ್ಟು ಕಳುಹಿಸುವ ಶಿಕ್ಷಣ ಸಂಸ್ಥೆಗಳನ್ನು ಗುರುತಿಸಿ ಅಂತಹವರ ಪರವಾನಗಿ ರದ್ದುಪಡಿಸಲು ಕ್ರಮ ಕೈಗೊಳ್ಳಬೇಕೆಂದು ಸಚಿವ ಕೃಷ್ಣಬೈರೇಗೌಡ ಹೇಳಿದರು.

ಇಂಗ್ಲಿಷ್ ಮಾಧ್ಯಮ ಶಾಲೆಗೆ ಮಕ್ಕಳನ್ನು ಸೇರಿಸಬೇಕೆಂಬ ವ್ಯಾಮೋಹ ಪಾಲಕರಿಗೆ ಹೆಚ್ಚಾಗಿದೆ. ಗ್ರಾಮ ಪಂಚಾಯಿತಿಗೊಂದು ಮಾದರಿ ಶಾಲೆ ತೆರೆಯಲು ಸರ್ಕಾರ ಮುಂದಾಗಿದೆ. ಅದಕ್ಕಾಗಿ 8 ಕೋಟಿ ರೂ. ಅನುದಾನ ಶಿಕ್ಷಕರು, ಸೌಕರ್ಯಗಳನ್ನು ಕಲ್ಪಿಸಬೇಕು. ಇಂಗ್ಲಿಷ್ ಮಾಧ್ಯಮ ಶಾಲೆ ತೆರೆದರೆ ಕನ್ನಡ ಮಾಧ್ಯಮ ಶಾಲೆಗಳಿಗೆ ದಾಖಲಾತಿ ಕುಸಿಯುತ್ತದೆ. ಆಗ ಅಲ್ಲಿನ ಶಿಕ್ಷಕರು ಎಲ್ಲಿಗೆ ಹೋಗಬೇಕೆಂದು ಪ್ರಶ್ನಿಸಿದರು.

ಸಭೆಯಲ್ಲಿ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಸಿಮೆಂಟ್ ಮಂಜು, ಸ್ವರೂಪ್ ಪ್ರಕಾಶ್, ಎಚ್.ಕೆ.ಸುರೇಶ್, ಡಿಸಿ ಲತಾಕುಮಾರಿ, ಸಿಇಒ ಪೂರ್ಣಿಮಾ ಇತರರು ಇದ್ದರು.

ಅಡ್ಡಗೋಡೆ ಮೇಲೆ ದೀಪ ಇಟ್ಟರೆ ಪ್ರಯೋಜನವಿಲ್ಲ: ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ಅವರನ್ನು ತರಾಟೆ ತೆಗೆದುಕೊಂಡರು. ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ವರದಿ ಕೊಟ್ಟರೆ ಯಾವುದೇ ಪ್ರಯೋಜನವಿಲ್ಲ. ನಿಮ್ಮ ಇಲಾಖೆಯಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಎಂದರು.

5655 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದು ನಿಂತಿದೆ. ಆದರೆ ಬಿಳಿಸುಳಿ ರೋಗ ಬೆಂಕಿ ಹಚ್ಚಿದಂತೆ ಹರಡುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬದಲು, ಕೇವಲ ರೋಗ ಹರಡಿರುವ ವಿಸ್ತೀರ್ಣದ ಬಗ್ಗೆ ಮಾಹಿತಿ ನೀಡಿ ಕೈತೊಳೆದುಕೊಂಡರೆ ಹೇಗೆ ಎಂದು ಪ್ರಶ್ನಿಸಿದರು. ಜಿಲ್ಲೆಯಲ್ಲಿ ಇಷ್ಟು ಕೃಷಿ ವಿಶ್ವವಿದ್ಯಾಲಯಗಳು, ತಂತ್ರಜ್ಞಾನಗಳು ಇವೆ. ಆದರೂ ಬಿಳಿಸುಳಿ ರೋಗಕ್ಕೆ ನಿಖರ ಕಾರಣ ತಿಳಿದಿಲ್ಲವೆಂದರೆ ಏನು ಪ್ರಯೋಜನ? ಎಂದು ಪ್ರಶ್ನಿಸಿದರು.

ಕೃಷಿ ಅಧಿಕಾರಿಗಳು ಕೇವಲ ನಗರದಲ್ಲಿ ಕುಳಿತು, ಬ್ಯಾನರ್ ಹಿಡಿದು ಫೋಟೋ ತೆಗೆಸಿಕೊಳ್ಳುವುದನ್ನೇ ಅರಿವು ಎಂದುಕೊಳ್ಳುತ್ತಾರೆ. ಇದು ರೈತರಿಗೆ ಯಾವುದೇ ಸಹಾಯ ಮಾಡುವುದಿಲ್ಲ. ಬ್ಯಾನರ್ ಹಿಡ್ಕೊಂಡು ಫೋಟೋ ತೆಗಿಸೋ ಅವೇರ್‌ನೆಸ್ ಬೇಡ. ರೈತರ ಬಳಿ ನೇರವಾಗಿ ಹೋಗಿ ಮಾಹಿತಿ ನೀಡಿ ಎಂದು ಖಡಕ್ಕಾಗಿ ಹೇಳಿದರು.

ಬೀಜೋಪಚಾರ ಮತ್ತು ಬೆಳೆ ಪರಿವರ್ತನೆ ಬಗ್ಗೆ ರೈತರಿಗೆ ವೈಜ್ಞಾನಿಕ ಮಾಹಿತಿ ನೀಡುವಂತೆ ತಾಕೀತು ಮಾಡಿದರು. ಕೃಷಿ ಇಲಾಖೆಯ ಕಾರ್ಯಗಳು ಕೇವಲ ಕಡತಗಳಲ್ಲಿ ಉಳಿಯಬಾರದು. ಬದಲಾಗಿ ರೈತರ ಜಮೀನುಗಳಲ್ಲಿ ಕಾರ್ಯರೂಪಕ್ಕೆ ಬರಬೇಕು ಎಂದರು.

ಹಾಸನ ಜಿಲ್ಲೆಯಲ್ಲಿ 18 ಸಾವಿರ ಕುಟುಂಬಗಳ ಹೆಸರಲ್ಲಿ ಬಿಪಿಎಲ್ ಪಡಿತರ ಚೀಟಿ ಇದ್ದರೂ ಸತತ ಮೂರು ತಿಂಗಳು ರೇಷನ್ ಪಡೆದಿಲ್ಲ ಏಕೆ? ಫೀಲ್ಡ್ ವೆರಿಫಿಕೇಷನ್ ಏಕೆ ಮಾಡಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಕೆಯ ಅರುಣ್ ಕುಮಾರ್ ಅವರನ್ನು ಪ್ರಶ್ನಿಸಿದರು.

20 ರೂ. ಮಾರ್ಜಿನ್ ಇಟ್ಟರೂ ನಷ್ಟ: ರೈತರಿಂದ ಹಾಲು ಖರೀದಿಸುವ ಖಾಸಗಿ ಕಂಪನಿಗಳು 5 ರೂ. ಲಾಭದ ಮಾರ್ಜಿನ್‌ನಲ್ಲಿ ಕೆಲಸ ಮಾಡುತ್ತವೆ. ಆದರೆ ಸರ್ಕಾರಿ ಡೇರಿಗಳು 20 ರೂ. ಮಾರ್ಜಿನ್ ಇಟ್ಟರೂ ನಷ್ಟದಲ್ಲಿದೆ ಅಂದ್ರೆ ಏನರ್ಥ ಎಂದು ಕೃಷ್ಣಬೈರೇಗೌಡ ಪ್ರಶ್ನಿಸಿದರು.

ನಿಮ್ಮಿಂದಾಗುತ್ತಿರುವ ನಷ್ಟ ರೈತರಿಗೆ ಹೊರೆಯಾಗುತ್ತಿದೆ. ಖಾಸಗಿಯವರಿಗಿಂತ ಐದು ಪಟ್ಟು ಹೆಚ್ಚು ಸಿಬ್ಬಂದಿ ಇದ್ದರೂ ಡೇರಿ ಹಾಲು ಮಾರ್ಕೆಟಿಂಗ್ ಮಾಡೋಕೆ ಏನು ಸಮಸ್ಯೆ? ನಿಮ್ಮ ಕೈಯನ್ನ ಯಾರಾದ್ರೂ ಕಟ್ಟಿಹಾಕಿದ್ದಾರ? ಅಸಲಿಗೆ ಸರ್ಕಾರ ಸಬ್ಸಿಡಿ ಕೊಡ್ತಾ ಇರೋದು ರೈತರಿಗಲ್ಲ, ನಿಮ್ಮ ಖರ್ಚು ವೆಚ್ಚಗಳಿಗೆ ಎಂದು ಡೇರಿ ಅಧಿಕಾರಿಯನ್ನು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net